ಮಡಿಕೇರಿ, ಮೇ ೨೯: ಪ್ರಸಕ್ತ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿ ಸಾಧನೆ ತೋರಿರುವ (೬೨೩ ಅಂಕ) ವಿದ್ಯಾರ್ಥಿನಿ ಸೋಮವಾರ ಪೇಟೆಯ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಆದ್ವಿ ಸಿ.ಎಸ್. ಅವರನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಗಿದೆ.
ಶಾಂತಳ್ಳಿಯ ಕೊತ್ತನಹಳ್ಳಿ ಗ್ರಾಮದ ಸತೀಶ್ ಸಿ.ಟಿ ಹಾಗೂ ಪ್ರಗತಿ ದಂಪತಿ ಪುತ್ರಿ
(ಮೊದಲ ಪುಟದಿಂದ) ಆದ್ವಿ ಅವರ ನಿವಾಸಕ್ಕೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗಧಾಮಪ್ಪ, ಅಕ್ಷರ ದಾಸೋಹದ ಜಿಲ್ಲಾ ಸಹಾಯಕ ನಿರ್ದೇಶಕ ಹೇಮಂತ್, ಜಿಲ್ಲಾ ಶಿಕ್ಷಣ ಅಧಿಕಾರಿ ಹಾಗೂ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಮಹದೇವಸ್ವಾಮಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ತೆರಳಿ ಈಕೆಯನ್ನು ಇಂದು ಇಲಾಖೆಯ ಪರವಾಗಿ ಸನ್ಮಾನಿಸಿದರು.
ಮೂರನೇ ಸ್ಥಾನದಿಂದ ಒಂದನೇ ಸ್ಥಾನಕ್ಕೆ
ಇಲ್ಲಿ ವಿಶೇಷವೆಂದರೆ ಮೇ ೨ ರಂದು ಫಲಿತಾಂಶ ಪ್ರಕಟವಾದ ಸಂದರ್ಭ ಆದ್ವಿ ೬೧೯ ಅಂಕಗಳಿಸಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದರು. ಆದರೆ ನಂತರದಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಈಕೆಗೆ ಹೆಚ್ಚುವರಿಯಾಗಿ ೪ ಅಂಕ ದೊರೆತು ಒಟ್ಟು ೬೨೩ ಅಂಕದ ಸಾಧನೆಯೊಂದಿಗೆ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಇದೇ ಶಾಲೆಯ ಮತ್ತೋರ್ವ ವಿದ್ಯಾರ್ಥಿನಿ ಪಂಚಮಿ ೬೨೧ ಹಾಗೂ ಈಕೆಯೊಂದಿಗೆ ವೀರಾಜಪೇಟೆಯ ಕಾವೇರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ.ಎಂ. ಆಶ್ರಯ್ ಅಕ್ಕಮ್ಮ ಕೂಡ ೬೨೧ ಅಂಕ ಗಳಿಸಿ ಆರಂಭದಲ್ಲಿ ಫಲಿತಾಂಶ ಪ್ರಕಟಗೊಂಡಾಗ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದರು. ಇದೀಗ ಇವರು ದ್ವಿತೀಯ ಸ್ಥಾನದಲ್ಲಿದ್ದಾರೆ. ಇವರುಗಳು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ಮೂರನೇ ಸ್ಥಾನದಲ್ಲಿ ೬೨೦ ಅಂಕಗಳಿಸಿರುವ ಗೋಣಿಕೊಪ್ಪಲು ಲಯನ್ಸ್ನ ತೇಜಸ್ ಭೀಮಯ್ಯ, ಮೂರ್ನಾಡು ಜ್ಞಾನ ಜ್ಯೋತಿಯ ಮಹಮದ್ ಸಾಹಿಲ್ ಹಾಗೂ ಕೂಡುಮಂಗಳೂರು ಯೂನಿಕ್ ಶಾಲೆಯ ಸಮೃದ್ಧಿ ಆಚಾರ್ ಅವರುಗಳಿದ್ದಾರೆ.