ಮಡಿಕೇರಿ, ಮೇ ೨೯: ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಸ್ಥಾನಗಳಿಗೆ ಭಾನುವಾರದಂದು ಚುನಾವಣೆ ನಿಗದಿಯಾಗಿತ್ತು. ಇದರ ಫಲಿತಾಂಶ ಇಂದು ಪ್ರಕಟಗೊಂಡಿದೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿಯ ನೊಕ್ಯ ಭಾಗ ಸಂಖ್ಯೆ ೩ರಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಪಿ.ಕೆ. ಗಣೇಶ್ ೩೦೫ ಮತಗಳಿಸಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಂಕರ್ ೧೧೩ ಮತ ಗಳಿಸಿ ಸೋಲನುಭವಿಸಿದ್ದಾರೆ. ತಾ. ೨೫ ರಂದು ಚುನಾವಣೆ ನಡೆದಿದ್ದು ತಾ. ೨೮ ರಂದು ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ನಡೆಯಿತು. ಒಟ್ಟು ೪೩೪ ಮತ ಚಲಾವಣೆಯಾಗಿದ್ದು ೧೩ ಮತಗಳು ತಿರಸ್ಕೃತಗೊಂಡಿದ್ದವು.

ಮತ ಎಣಿಕೆ ಸಂದರ್ಭ ಕಾಂಗ್ರೆಸ್ ಪಕ್ಷದ ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಕುಮಾರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ದೇವರಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಬಸಂತ್ ಕುಮಾರ್, ತಿತಿಮತಿ ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಚುನಾವಣಾ ಅಧಿಕಾರಿಗಳು ಗೆಲುವು ಸಾಧಿಸಿದ ಅಭ್ಯರ್ಥಿಗೆ ದೃಢೀಕರಣ ಪತ್ರ ವಿತರಿಸಿದರು.

ಕೆ. ನಿಡುಗಣೆ ಗ್ರಾ.ಪಂ.ನ ಕರ್ಣಂಗೇರಿ ಹಾಗೂ ಕೆ. ನಿಡುಗಣೆ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಕೆ. ನಿಡುಗಣೆ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಾನ್ಸಿ ಹಾಗೂ ಕರ್ಣಂಗೇರಿ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನೇತ್ರ ಅವರುಗಳು ಆಯ್ಕೆಯಾಗಿದ್ದಾರೆ. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಸದಸ್ಯರುಗಳಾದ ಮುದ್ದಂಡ ಡೀನ್ ಬೋಪಣ್ಣ, ಕೊಕ್ಕಲೇರ ಅಯ್ಯಪ್ಪ, ಜಾನ್ಸನ್ ಪಿಂಟೋ, ಅನಿತಾ ಪುಷ್ಪಲತಾ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ರೈ, ಎರಡು ಪಕ್ಷದ ಕಾರ್ಯಕರ್ತರು ಇದ್ದರು.

ಭಾಗಮಂಡಲ ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಾವೂರು ಗ್ರಾಮದ ಪೂವಮ್ಮ ಎಂ.ಎಸ್. ಅವರ ಬದಲಿಗೆ ಬಿಜೆಪಿ ಬೆಂಬಲಿತ ತಾವೂರು ಗ್ರಾಮದ ಕವಿತ ಎಂ.ಆರ್. (ಪ. ಪಂಗಡ) ಅವಿರೋಧ ಆಯ್ಕೆಯಾಗಿದ್ದಾರೆ.

ಸದಸ್ಯೆ ಪೂವಮ್ಮ ನಿಧನರಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ ಒಂದು ಸ್ಥಾನ ಖಾಲಿಯಾಗಿತ್ತು. ಆಯ್ಕೆಯಾಗಿದ್ದಾರೆ. ಎಮ್ಮೆಮಾಡುವಿನ ೨ ಸ್ಥಾನಕ್ಕೆ ಹಾಗೂ ತಿತಿಮತಿಯ ಇನ್ನಿತರ ನಾಲ್ಕು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಈ ಸ್ಥಾನ ತೆರವಾಗಿಯೇ ಇದೆ.