ಸಂಪೂರ್ಣ ಮಗುಚುವ ಆತಂಕ

ಸೋಮವಾರಪೇಟೆ, ಮೇ ೨೯: ಸಣ್ಣ ನೀರಾವರಿ ಇಲಾಖೆ ಮೂಲಕ ಪ್ರವಾಹ ನಿಯಂತ್ರಣ ಕಾಮಗಾರಿ ಯೋಜನೆಯಡಿ ಇಲ್ಲಿನ ಜೂನಿಯರ್ ಕಾಲೇಜು ಮುಂಭಾಗದ ಟರ್ಫ್ ಮೈದಾನದ ಬದಿಯಲ್ಲಿ, ಕಳೆದ ೬ ತಿಂಗಳ ಹಿಂದಷ್ಟೇ ಮುಕ್ತಾಯಗೊಂಡ ತಡೆಗೋಡೆ, ಮೊದಲ ಮಳೆಗೆ ವಾಲಿದ್ದು, ಸಂಪೂರ್ಣ ಮಗುಚುವ ಆತಂಕ ಸೃಷ್ಟಿಸಿದೆ.

ಸಣ್ಣ ನೀರಾವರಿ ಇಲಾಖೆಯಿಂದ ರೂ. ೪೦ ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಟರ್ಫ್ ಮೈದಾನದ ಕೆಳಭಾಗದಲ್ಲಿ ಮಣ್ಣು ಕುಸಿಯುವ ಆತಂಕ ಇದ್ದ ಹಿನ್ನೆಲೆ ತಡೆಗೋಡೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು. ಅದರಂತೆ ನಿಗದಿತ ಅವಧಿಯೊಳಗೆ ಕಾಮಗಾರಿಯೂ ಪೂರ್ಣಗೊಂಡಿದ್ದು, ಇದೀಗ ಪ್ರಥಮ ಮಳೆಗೆ ಅಲ್ಪ ಪ್ರಮಾಣದಲ್ಲಿ ವಾಲಿದೆ.

ಹಾಗೆಯೇ ತಡೆಗೋಡೆ ಮತ್ತು ಮೈದಾನದ ನಡುವೆ ಹಾಕಲಾಗಿದ್ದ ಮಣ್ಣು ಜರುಗಿದ್ದು, ತಡೆಗೋಡೆ ಇನ್ನಷ್ಟು ವಾಲುವ ಆತಂಕ ಎದುರಾಗಿದೆ. ಕೆಳಭಾಗದಲ್ಲಿ ರಸ್ತೆ ಹಾಗೂ ವಾಸದ ಮನೆಗಳಿದ್ದು, ಒಂದು ವೇಳೆ ತಡೆಗೋಡೆ ಸಂಪೂರ್ಣ ಬಿದ್ದರೆ ಅನಾಹುತ ಸಂಭವಿಸುವ ಆತಂಕ ಸ್ಥಳೀಯರಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಕುಮಾರಸ್ವಾಮಿ ಅವರು, ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ತಡೆಗೋಡೆಯ ನಡುಭಾಗಕ್ಕೆ ಹಾಕಿರುವ ಮಣ್ಣು ಹೆಚ್ಚಾಗಿರುವ ಹಿನ್ನೆಲೆ ಅಲ್ಪ ಪ್ರಮಾಣದಲ್ಲಿ ವಾಲಿದೆ. ತಡೆಗೋಡೆ ಸಂಪೂರ್ಣ ಕುಸಿಯುವ ಅಥವಾ ಬೀಳುವ ಆತಂಕ ಇಲ್ಲ ಎಂದು ಭರವಸೆ ನೀಡಿದ್ದಾರೆ.

ಮಳೆ ಕಡಿಮೆಯಾದ ನಂತರ ಮಣ್ಣನ್ನು ತೆಗೆದು, ಕೀ ವಾಲ್‌ಗಳನ್ನು ಅಳವಡಿಸಲಾಗುವುದು. ಗುತ್ತಿಗೆದಾರರಿಗೆ ಕಾಮಗಾರಿಯ ಪೂರ್ಣ ಮೊತ್ತವನ್ನು ಇನ್ನೂ ಪಾವತಿಸಿಲ್ಲ. ಶೇ. ೫೦ರಷ್ಟಕ್ಕೆ ಬಿಲ್ ಮಾತ್ರ ನೀಡಿದ್ದು, ಇನ್ನೂ ಗುತ್ತಿಗೆದಾರರಿಗೆ ಹಣ ಜಮೆಯಾಗಿಲ್ಲ. ತಡೆಗೋಡೆಯ ಮಣ್ಣು ತೆರವು ಹಾಗೂ ಕೀವಾಲ್ ಅಳವಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.