ವೀರಾಜಪೇಟೆ, ಮೇ ೨೭: ಕಾಫಿ ತೋಟವೊಂದರಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ನಾಯಿ ಬೊಗಳುವಾಗ ತಪ್ಪಿಸಿಕೊಳ್ಳಲು ಓಡಿದ ಚಿರತೆ ತಂತಿ ಬೇಲಿಗೆ ಸಿಲುಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದುದನ್ನು ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆದಮುಳ್ಳೂರು ಗ್ರಾಮದ ಮಾಳೇಟಿರ ಗೌತಮ್ ಎಂಬವರ ತೋಟದ ಬೇಲಿಗೆ ಸಿಲುಕಿಕೊಂಡಿದ್ದ ಚಿರತೆ ಯನ್ನು ರಕ್ಷಿಸಿ ಅರಣ್ಯಕ್ಕೆ ಬಿಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸಫಲರಾಗಿದ್ದಾರೆ.
(ಮೊದಲ ಪುಟದಿಂದ) ಚಿರತೆ ಕಾಣಿಸಿಕೊಂಡಿದ್ದನ್ನು ಗಮನಿಸಿದ ಕಾಫಿ ತೋಟದ ಮಾಲೀಕರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅರವಳಿಕೆ ಚುಚ್ಚುಮದ್ದು ನೀಡಿ ಅದನ್ನು ರಕ್ಷಿಸಲಾಯಿತು. ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯಲಾಯಿತು.
ಕುಶಾಲನಗರ ಉಪ ವಲಯ ಅರಣ್ಯ ಅಧಿಕಾರಿ ಹಾಗೂ ಶೂಟರ್ ಕನ್ನಂಡ ರಂಜನ್ ಹಾಗೂ ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಅವರು ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಬಳಿಕ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಾಗರಹೊಳೆ ಡಿಡಿಕೊಪ್ಪ ಅಂತರಸAತೆ ಅರಣ್ಯಕ್ಕೆ ಸ್ಥಳಾಂತರ ಮಾಡಲಾಯಿತು.
ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.
ಕಾರ್ಯಾಚರಣೆಯಲ್ಲಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ಎಸಿಎಫ್. ಗೋಪಾಲ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ಬಿಡದೆ ಸುರಿಯುತ್ತಿರುವ ವರುಣನ ಆರ್ಭಟದ ನಡುವೆ ಚಿರತೆ ಕಾಣಿಸಿಕೊಂಡ ಹಿನ್ನೆಲೆ ಗ್ರಾಮಸ್ಥರೆಲ್ಲ ಕೆಲಕಾಲ ಭಯಬೀತರಾಗಿದ್ದರು.