ಕಣಿವೆ, ಮೇ ೨೭: ಕುಶಾಲ ನಗರ ತಾಲೂಕಿನ ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಅರಿಶಿನಗುಪ್ಪೆ ಗ್ರಾಮದಲ್ಲಿರುವ ಕೊಡಗು ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವಿನ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಸಿದ್ದಲಿಂಗಪುರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ಎಡಬಿಡದೇ ಸುರಿದ ಮಳೆಯಲ್ಲೇ ಕ್ರೀಡಾಪಟುಗಳು ವಾಲಿಬಾಲ್ ಆಡಿದರು. ಸ್ಪೋರ್ಟ್ಸ್ ಅಕಾಡೆಮಿಯ ಪ್ರಮುಖರಾದ ಕಳಂಜನ ಉದಯಕುಮಾರ್, ಕೂಡಕಂಡಿ ದರ್ಶನ್, ಕೊರಂಬಡ್ಕ ನಂದಾ, ಪೊನ್ನಚ್ಚನ ಲವೀನ್, ತೊರೆನೂರು ಗ್ರಾ.ಪಂ. ಸದಸ್ಯರಾದ ನಿರ್ವಾಣಿ ಪ್ರಕಾಶ್ ಮೊದಲಾದವರಿದ್ದರು.

ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಸಿದ್ದಲಿಂಗಪುರದ ಉದ್ಯಮಿ ನಾಪಂಡ ಮುತ್ತಪ್ಪ, ಕ್ರೀಡೆಗಳು ಪರಸ್ಪರ ಸ್ನೇಹ ಹಾಗೂ ಸೌಹಾರ್ದತೆಗೆ ಸಹಕಾರಿ ಎಂದರು. ಪಂದ್ಯಾವಳಿಯಲ್ಲಿ ೮ ತಂಡಗಳು ಪಾಲ್ಗೊಂಡಿದ್ದವು.