ಸೋಮವಾರಪೇಟೆ, ಮೇ ೨೭: ರಾಜ್ಯ ಸರ್ಕಾರದ ಮಹತ್ವಾ ಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯಡಿ ಖಾತೆಗೆ ಬಂದ ಹಣವನ್ನು ಒಟ್ಟುಗೂಡಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‌ಟಾಪ್ ಖರೀದಿಸಿದ ಯುವತಿಯನ್ನು ಶಾಸಕ ಮಂತರ್ ಗೌಡ ಹಾಗೂ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಪಟ್ಟಣದ ಚೌಡೇಶ್ವರಿ ಬ್ಲಾಕ್ ನಿವಾಸಿ ಆಸಿಫ್ ಮತ್ತು ಎಂ.ಎ. ರುಬೀನಾ ದಂಪತಿ ಪುತ್ರಿ ಇಶಾ, ಯುವ ನಿಧಿ ಯೋಜನೆಯಡಿ ಹೆಸರು ನೋಂದಾಯಿಸಿಕೊAಡಿದ್ದು, ಸರ್ಕಾರದಿಂದ ಪ್ರತಿ ತಿಂಗಳು ತನ್ನ ಖಾತೆಗೆ ೩ ಸಾವಿರ ರೂಪಾಯಿ ಜಮೆಯಾಗಿರುವುದನ್ನು ಒಟ್ಟು ಗೂಡಿಸಿ, ಲ್ಯಾಪ್‌ಟಾಪ್ ಖರೀದಿಸಿದ್ದಾಳೆ. ಸರಕಾರದ ಯುವನಿಧಿ ಯೋಜನೆಯನ್ನು ಸದುದ್ದೇಶಕ್ಕೆ ಬಳಸಿಕೊಂಡ ಇಶಾಳನ್ನು ಶಾಸಕ ಕಚೇರಿಯಲ್ಲಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಸನ್ಮಾನಿಸಿದರು. ಇದರೊಂದಿಗೆ ತಾ.ಪಂ. ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ, ಸಮಿತಿಯ ಅಧ್ಯಕ್ಷ ಕಾಂತರಾಜ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರುಗಳು ಸನ್ಮಾನಿಸಿದರು.