ವೀರಾಜಪೇಟೆ, ಮೇ ೨೭: ಇಲ್ಲಿಗೆ ಸಮೀಪದ ಪೆರುಂಬಾಡಿಯ ಸಂಶುಲ್ ಉಲಮಾ ಎಜುಕೇಶನಲ್ ಅಕಾಡೆಮಿಯಲ್ಲಿ ಎಸ್.ಎಸ್. ಎಲ್.ಸಿ. ಹಾಗೂ ಪಿಯುಸಿಯಲ್ಲಿ ಶೇ ೭೫ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಒದಗಿಸಲು ಅಕಾಡೆಮಿ ನಿರ್ಧರಿಸಿತು.
ಶೇ. ೭೫ ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಪಿಯುಸಿ ಹಾಗೂ ಪದವಿ ಶಿಕ್ಷಣಕ್ಕೆ ಶುಲ್ಕ ರಹಿತ ಉಚಿತ ಪ್ರವೇಶಾತಿ ನೀಡಲಾಗುವುದು ಎಂದು ಅಕಾಡೆಮಿ ಪ್ರಮುಖರು ತಿಳಿಸಿದರು.
ಪ್ರಾಂಶುಪಾಲೆ ಭಾನುಮತಿ ಮಾತನಾಡಿ, ಕಳೆದ ೧೩ ವರ್ಷಗಳಿಂದ ಬಡ, ಅನಾಥ, ನಿರ್ಗತಿಕ ಹೆಣ್ಣು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಭವಿಷ್ಯ ರೂಪಿಸಲು ಅಕಾಡೆಮಿ ಮುಂದಾಗಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಕಳೆದ ಹಲವು ವರ್ಷಗಳಿಂದಲೂ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಸಾಧನೆ ಮಾಡುವುದರೊಂದಿಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಇತರ ಕಾರ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ರಾಜ್ಯ ಅಂತರಾಷ್ಟಿçÃಯ ಮಟ್ಟದಲ್ಲೂ ಗುರುತಿಸಿಕೊಂಡಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ ೭೫ ರಷ್ಟು ಅಂಕ ಗಳಿಸಿದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸಂಶುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ ಮಾತನಾಡಿ, ಕಳೆದ ೧೩ ವರ್ಷಗಳಿಂದ ಬಡ, ಅನಾಥ, ನಿರ್ಗತಿಕ ಹೆಣ್ಣು ಮಕ್ಕಳ ಕೇಂದ್ರವನ್ನು ಪ್ರಾರಂಭಿಸಿ ನೂರಾರು ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಪೂರ್ವ ಪ್ರಾಥಮಿಕದಿಂದ ಪದವಿ ಶಿಕ್ಷಣ ತನಕ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರಿಗೆ ಪ್ರಸಕ್ತ ಸಾಲಿನಲ್ಲಿ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದೇವೆ ಎಂದರು.