ಸೋಮವಾರಪೇಟೆ, ಮೇ ೨೭: ಪ್ರಧಾನ ಮಂತ್ರಿ ಗ್ರಾಮ ಸಡಕ್ ಮೂಲಕ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಳೆದ ೨೦೧೭ರಲ್ಲಿ ಆರಂಭಗೊAಡು ೨೦೨೦ಕ್ಕೆ ಪೂರ್ಣಗೊಂಡಿರುವ ರಸ್ತೆಗೆ ಇದೀಗ ಹಾಕಲಾಗಿದ್ದ ಮರುಡಾಂಬರು ಕಳಪೆಯಾದ ಹಿನ್ನೆಲೆ, ಡಿಸೆಂಬರ್ ನಂತರ ಮತ್ತೆ ಡಾಂಬರು ಹಾಕಲು ನಿರ್ಧರಿಸಲಾಗಿದೆ.

ಕಾಮಗಾರಿ ಕಳಪೆಯಾಗಿರುವ ಬಗ್ಗೆ ಕೇಳಿಬಂದ ದೂರುಗಳ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಮಂತರ್ ಗೌಡ ಅವರು, ಇದೀಗ ಹಾಕಿರುವ ಡಾಂಬರನ್ನು ಸಂಪೂರ್ಣವಾಗಿ ಕಿತ್ತು ತೆಗೆದು, ಮರು ಡಾಂಬರು ಹಾಕುವಂತೆ ಸೂಚಿಸಿದ್ದರು.

ಅದರಂತೆ ಯಂತ್ರದ ಮೂಲಕ ಡಾಂಬರು ಕೀಳಲು ಮುಂದಾದ ಸಂದರ್ಭ, ಹಳೆಯ ರಸ್ತೆಯೂ ಕಿತ್ತುಬರುತ್ತಿರುವ ಹಿನ್ನೆಲೆ, ಸದ್ಯಕ್ಕೆ ಡಾಂಬರು ತೆರವು ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಮಳೆಯೂ ಸುರಿಯುತ್ತಿರುವುದರಿಂದ ತಕ್ಷಣಕ್ಕೆ ರಸ್ತೆ ನಿರ್ಮಾಣ ಅಸಾಧ್ಯ. ಒಂದು ವೇಳೆ ಈಗಿನ ಡಾಂಬರು ತೆಗೆದರೆ ಗ್ರಾಮಸ್ಥರಿಗೆ ಓಡಾಡಲು ಅನಾನುಕೂಲವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ ಹಿನ್ನೆಲೆ, ಕೆಲಸವನ್ನು ಸ್ಥಗಿತಗೊಳಿಸಲಾಗಿದೆ.

ಮುಂದಿನ ಡಿಸೆಂಬರ್‌ನಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಮರು ಡಾಂಬರೀಕರಣ ಮಾಡಿದ ನಂತರವಷ್ಟೇ ಗುತ್ತಿಗೆದಾರರಿಗೆ ಅಂತಿಮ ಬಿಲ್ ನೀಡಬೇಕೆಂಬ ಷರತ್ತು ವಿಧಿಸಿ ಸದ್ಯಕ್ಕೆ ಕಳಪೆ ಡಾಂಬರು ತೆರವು ಕಾರ್ಯವನ್ನು ಕೈಬಿಡಲಾಗಿದೆ.