ಸಿದ್ದಾಪುರ, ಮೇ ೨೭: ಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಕಾಫಿ ಬೆಳೆಗಾರ ಮೃತಪಟ್ಟ ಧಾರುಣ ಘಟನೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ.
ಬಾಡಗ ಬಾಣಂಗಾಲದ ಪೊನ್ನಚಂಡ ವಿಷ್ಣು ಬೆಳ್ಯಪ್ಪ (೬೪) ಮೃತ ದುರ್ದೈವಿ.
ವಿಷ್ಣು ಬೆಳ್ಯಪ್ಪ ಅವರು ಪತ್ನಿ ಜೊತೆ ಬಾಡಗ ಬಾಣಂಗಾಲದಲ್ಲಿ ನೆಲೆಸಿದ್ದು, ಪುತ್ರರಿಬ್ಬರು ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಮನೆಯ ಪಕ್ಕದಲ್ಲಿ ಇರುವ ಅವರ ಹಳೆಯ ಮನೆಯನ್ನು ಸ್ವಚ್ಛಗೊಳಿಸಲು ತೆರಳಿದ ವಿಷ್ಣು ಅವರು ಮನೆ ಹೊರ ಆವರಣವನ್ನು ಶುಚಿಗೊಳಿಸಿ ಬೆಳಿಗ್ಗೆ ೭.೧೫ರ ಸುಮಾರಿಗೆ ವಿಶ್ರಾಂತಿಗಾಗಿ ಚೇರ್ನಲ್ಲಿ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಮಾವಿನ ಮರದ ಕೊಂಬೆ ಇವರ ಮೇಲೆ ಬಿದ್ದಿದೆ. ಈ ಸಂದರ್ಭದಲ್ಲಿ ತಲೆ ಹಾಗೂ ಕಣ್ಣಿನ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದ ವಿಷ್ಣು ಅವರನ್ನು ಮನೆಗೆ ಹಾಲು ತರುವ ಹಂಸ ಅವರ ಸಹಾಯದಿಂದ ಕಾರಿನಲ್ಲಿ ಪತ್ನಿ ಹಾಗೂ ಸ್ಥಳೀಯರು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ, ಗಂಭೀರ ಸ್ಥಿತಿಯಲ್ಲಿದ್ದ ವಿಷ್ಣು ಬೆಳ್ಯಪ್ಪ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿ ದ್ದಾರೆ.
ವಿಷ್ಣು ಬೆಳ್ಯಪ್ಪ ಅವರ ಪತ್ನಿ ವಿನು ಬೆಳ್ಯಪ್ಪ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬAಧ ಪ್ರಕರಣ ದಾಖಲಾಗಿದೆೆ. ಸ್ಥಳಕ್ಕೆ ವೀರಾಜಪೇಟೆ ತಾಲೂಕಿನ ಗ್ರೇಡ್-೨ ತಹಶೀಲ್ದಾರ್ ಪ್ರದೀಪ್ ಕುಮಾರ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿ, ಗ್ರಾಮ ಪಂಚಾಯಿತಿ ಸದಸ್ಯರುಗಳು ಭೇಟಿ ನೀಡಿದರು.
ಮೃತ ವಿಷ್ಣು ಬೆಳ್ಯಪ್ಪ ಅವರು ಮಾಲ್ದಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ನಿರ್ದೇಶಕರಾಗಿದ್ದರು. ಮೃತರ ಮರಣೋತ್ತರ ಪರೀಕ್ಷೆಯನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಮೃತ ವಿಷ್ಣು ಬೆಳ್ಳಪ್ಪ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿತು.