ಮಡಿಕೇರಿ, ಮೇ ೧೬: ಭಾರತ ದೇಶ ಸದೃಢವಾಗಿರಲು ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಬುನಾದಿ ಎಂದು ಮೈಸೂರು ಶಿವಯೋಗಿ ಉರಿಲಿಂಗ ಪೆದ್ದಿ ಮಠದ ಪೀಠಾಧಿಪಾತಿಗಳಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘ ಪುತ್ತೂರು ವಿಭಾಗದ ಮಡಿಕೇರಿ ಘಟಕ ವತಿಯಿಂದ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಲ್ಲರ ಭಾಗ್ಯದ ಭಾಗ್ಯವಿಧಾತ ಅಂಬೇಡ್ಕರ್ ಅವರಾಗಿದ್ದಾರೆ. ಪುಸ್ತಕಗಳಲ್ಲಿ ಅಂಬೇಡ್ಕರ್ ಜೀವಂತವಾಗಿದ್ದು, ಮಕ್ಕಳಿಗೆ ಅದರ ಪರಿಚಯ ಮಾಡಿಕೊಡಬೇಕು. ಮೆರವಣಿಗೆ ಬದಲು ಬರವಣಿಗೆಯಲ್ಲಿದ್ದಾರೆ ಎಂದರು.
ಬಸ್ ಚಾಲಕನ ಮಗ ಜಿಲ್ಲಾಧಿಕಾರಿಯಾಗಲು ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂಬ ಕೊಡುಗೆಯಿಂದ ಸಾಧ್ಯವಾಗಿದೆ. ಅಂಬೇಡ್ಕರ್ ವಾದ ಸ್ವಾಭಿಮಾನ ಮತ್ತು ಘನತೆಯಾಗಿದೆ. ಅಂಬೇಡ್ಕರ್ ಜಯಂತಿ ಜ್ಞಾನದ ಜಯಂತಿಯಾಗಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ತ್ಯಾಗದಿಂದ ನಾವೆಲ್ಲ ಇಷ್ಟರ ಮಟ್ಟಿಗೆ ಬೆಳವಣಿಗೆ ಸಾಧಿಸಿದ್ದೇವೆ. ಗುಲಾಮಗಿರಿಯಿಂದ ಹೊರಬರಬೇಕು.ಅಂಬೇಡ್ಕರ್ ಅವರನ್ನು ಬೀದಿಯಲ್ಲಿ ನಿಲ್ಲಿಸುವ ಬದಲು ಮನೆಯೊಳಗೆ ಕರೆದೊಯ್ಯಬೇಕು. ಇದರಿಂದ ಸಮಾಜ ಬದಲಾವಣೆಯಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಜಿಲ್ಲೆಯ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಅಗತ್ಯ ಸಹಕಾರವನ್ನು ನೀಡಿದ್ದಾರೆ. ಕುಶಾಲನಗರದಲ್ಲಿ ಬಸ್ ಡಿಪೋ ಮಂಜೂರಾತಿಯಾಗಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ಉದ್ಘಾಟನೆಯಾಗುತ್ತದೆ. ಶನಿವಾರಸಂತೆಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ವಿಭಾಗೀಯ ಕಚೇರಿಗೆ ಪ್ರಯತ್ನ ನಡೆಯುತ್ತಿದೆ. ಇದರ ಕಾರ್ಯಗತಕ್ಕೆ ಶ್ರಮಿಸಲಾಗುವುದು ಎಂದ ಅವರು, ಕೆಲವು ಸೂಕ್ಷö್ಮ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸೇವೆಯಲ್ಲಿ ಸಮಯ ಪಾಲನೆಯಾಗಬೇಕು ಎಂದು ತಿಳಿಸಿದರು. ವಿದೇಶದಲ್ಲಿ ಓದಿ ಮರಳಿ ಮಾತೃ ನೆಲೆಗೆ ಬರುವುದು ವಿರಳ. ಆದರೆ, ಅಂಬೇಡ್ಕರ್ ಅವರು ಆ ಕಾಲದಲ್ಲಿ ವಿದೇಶದಲ್ಲಿ ಓದಿ ಭಾರತದ ಶ್ರೇಯೋಭಿವೃದ್ಧಿಗೆ ಬಂದು ಸಮಾಜದ ಉನ್ನತಿಗೆ ಚಿಂತಿಸಿ ಕೆಲಸ ಮಾಡಿದ್ದರು. ಇವರ ಕಾರ್ಯತತ್ಪರತೆ ಎಲ್ಲರಿಗೂ ಆದರ್ಶ. ಅವರ ಕೆಲಸವನ್ನು ಸದಾ ಸ್ಮರಿಸಿಕೊಳ್ಳಬೇಕು. ಅವರ ಕನಸು ನನಸಾಗುವತ್ತ ನಾವೆಲ್ಲ ಕೆಲಸ ಮಾಡಬೇಕು. ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಸ್ವಾವಲಂಬಿಗಳಾಗುವAತೆ ಮಾಡಿ ಅಂಬೇಡ್ಕರ್ ಅವರಿಗೆ ಗೌರವ ದೊರಕುವ ಕೆಲಸ ನಮ್ಮಿಂದಾಗಬೇಕು ಎಂದು ಕರೆ ನೀಡಿದರು
ಸಾರಿಗೆ ಇಲಾಖೆ ಲಾಭದಾಯಕ ನಿಗಮವಲ್ಲ. ಸಾರ್ವಜನಿಕರ ಸೇವೆಗಾಗಿ ಸಾರಿಗೆ ನಿಗಮ ಶ್ರಮಿಸಬೇಕು. ಲಾಭ-ನಷ್ಟದ ಲೆಕ್ಕಾಚಾರ ಹಾಕಬಾರದು. ಕುಶಾಲನಗರ ಹಾಗೂ ಮಡಿಕೇರಿಯಲ್ಲಿಯೂ ಅಂಬೇಡ್ಕರ್ ಭವನ ನಿರ್ಮಾಣ ಆಗುತ್ತದೆ ಎಂದು ತಿಳಿಸಿದರು.
ಸಂಘದ ರಾಜ್ಯಾಧ್ಯಕ್ಷ ಎಫ್.ಹೆಚ್. ಜಕ್ಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಅತ್ಯಂತ ಹೆಚ್ಚು ಓದಿದ ವಿದ್ಯಾವಂತ ಎಂಬ ಹೆಗ್ಗಳಿಕೆ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅವರಂತೆ ನಾವು ವಿದ್ಯಾವಂತರಾಗಬೇಕು. ಕೀಳರಿಮೆ ಒಡೆದು ಹಾಕದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ. ಇಷ್ಟೆಲ್ಲ ಯೋಜನೆಯಿದ್ದರೂ ಹಿಂದುಳಿಯುತ್ತಿರುವುದು ವಿಷಾದನೀಯ. ಕೊಡಗಿನಲ್ಲಿ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ಕಚೇರಿ ಆರಂಭಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಭಾಷಣಕಾರರಾಗಿ ಮಂಡ್ಯದ ಅಂಬೇಡ್ಕರ್ ವಿಚಾರವಾದಿ ರವಿಕೀರ್ತಿ ನಾಗಪುರ ಪಾಲ್ಗೊಂಡು ಮಾತನಾಡಿದರು.
ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಕೆ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಣರಣಪ್ಪ, ಖಜಾಂಜಿ ವೆಂಕಟೇಶಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ್, ಎಂ. ರವಿಪ್ರಕಾಶ್, ಉಪಾಧ್ಯಕ್ಷೆ ಬಿ. ಸುಂದರಮ್ಮ, ಬೆಂಗಳೂರು ಅಧ್ಯಕ್ಷ ಮುನಿನಾರಾಯಣ ಸ್ವಾಮಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭಾ ಮಾಜಿ ಅಧ್ಯಕ್ಷ ಹಚ್.ಎಂ. ನಂದಕುಮಾರ್, ಮಡಿಕೇರಿ ಘಟಕ ವ್ಯವಸ್ಥಾಪಕ ಮೆಹಬೂಬ್ ಅಲಿ, ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಬಿ. ಜಯೇಂದ್ರ, ದಲಿತ ಸಂಘಟನರ ಪ್ರಮುಖರಾದ ಜಯಪ್ಪ ಹಾನಗಲ್ಲು, ಕೆ.ಬಿ. ರಾಜು, ಹೆಚ್.ಎಲ್. ದಿವಾಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ಸರಕಾರಿ ಬಸ್ ನಿಲ್ದಾಣದ ತನಕ ಅಲಂಕೃತ ಮಂಟಪದಲ್ಲಿ ಅಂಬೇಡ್ಕರ್ ಪ್ರತಿಮೆ ಹೊತ್ತ ಮೆರವಣಿಗೆ ಸಾಗಿ ಬಂತು. ಇದಕ್ಕೆ ಪುತ್ತೂರು ವಿಭಾಗದ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಬಿ. ಹೊಸಪೂಜಾರಿ ಚಾಲನೆ ನೀಡಿದರು.