ಕುಶಾಲನಗರ, ಕುಶಾಲನಗರ ಗಣಪತಿ ದೇವಾಲಯ ಕಟ್ಟಡಗಳ ತೆರವು ಕಾರ್ಯಾಚರಣೆ ಸಂದರ್ಭ ಬೀದಿಪಾಲಾಗಿದ್ದ ಪೇಪರ್ ಪ್ರಕಾಶಣ್ಣ ಅವರಿಗೆ ಸೂರು ಕಲ್ಪಿಸುವಲ್ಲಿ ಸ್ಥಳೀಯ ಎಪಿಸಿಎಂಎಸ್ ಆಡಳಿತ ಮಂಡಳಿ ಮುಂದಾಗಿದೆ.
ಕಳೆದ ಆರು ದಶಕಗಳಿಂದ ವಿವಿಧ ಪತ್ರಿಕೆಗಳ, ನಿಯತಕಾಲಿಕಗಳ ವಿತರಕರಾಗಿದ್ದ ವಿ.ಪಿ. ಪ್ರಕಾಶ್ (೭೨) ಕುಶಾಲನಗರ ಪಟ್ಟಣದ ಗಣಪತಿ ದೇವಾಲಯದ ಹಿಂಭಾಗದಲ್ಲಿದ್ದ ಅಂಗಡಿ ಮಳಿಗೆಯ ಆವರಣದಲ್ಲಿ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು.
ದೇವಾಲಯದ ನೂತನ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಅಲ್ಲಿನ ಕಟ್ಟಡಗಳ ತೆರವು ನಂತರ ಹಲವು ಸಮಯ ಪ್ರಕಾಶ್ ಅವರು ರಸ್ತೆ ಬದಿಯಲ್ಲಿ ಪತ್ರಿಕೆಗಳ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಈ ಬಗ್ಗೆ ಪತ್ರಿಕೆಗಳಲ್ಲಿ ಪತ್ರಿಕಾ ವಿತರಕರ ಸಂಕಷ್ಟದ ಬಗ್ಗೆ ಸುದ್ದಿ ಪ್ರಕಟಗೊಂಡಿತ್ತು. ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರಿಗೆ ಕೂಡ ವ್ಯವಸ್ಥೆ ಕಲ್ಪಿಸುವಂತೆ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮನವಿ ಮಾಡಿತ್ತು. ಸರ್ಕಾರಿ ಬಸ್ ನಿಲ್ದಾಣದ ಬಳಿ ನಿರ್ಮಾಣಗೊಳ್ಳಲಿರುವ ನೂತನ ಶೆಡ್ನಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದರು. ಇದೀಗ ಇದನ್ನು ಗಮನಿಸಿದ ಕುಶಾಲನಗರ ಎಪಿಸಿಎಂಎಸ್ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎನ್. ಕುಮಾರಪ್ಪ ಮತ್ತು ಪದಾಧಿಕಾರಿಗಳು ವ್ಯವಸ್ಥಾಪಕ ಜಗದೀಶ್ ಅವರುಗಳು ಕುಶಾಲನಗರ ಪಟ್ಟಣದ ಮುಖ್ಯ ರಸ್ತೆ -ಪ್ರವಾಸಿ ಮಂದಿರಕ್ಕೆ ತೆರಳುವ ಮಾರ್ಗದ ವೃತ್ತ ಬಳಿ ಸಂಘದ ಕಟ್ಟಡದ ಆವರಣದಲ್ಲಿ ಶೆಡ್ ನಿರ್ಮಿಸಿ ಪತ್ರಿಕೆ ವಿತರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.