ಮಡಿಕೇರಿ, ಮೇ ೧೩: ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಕೊಂಡು ಕಾಂಗ್ರೆಸ್ ಜಿಲ್ಲೆಯಲ್ಲಿ ದ್ವೇಷ ರಾಜಕಾರಣ ನಡೆಸುತ್ತಿದೆ ಎಂದು ಜಿಲ್ಲಾ ಬಿಜೆಪಿ ಗಂಭೀರ ಆರೋಪ ಮಾಡಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ರಾಜ್ಯದಲ್ಲಿ ಪೊಲೀಸ್ ಇಲಾಖೆ ಕಾಂಗ್ರೆಸ್ ಕೈಗೊಂಬೆಯಾಗಿದ್ದು, ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವಿಪಕ್ಷಗಳನ್ನು ಹಾಗೂ ಕಾಂಗ್ರೆಸ್ ಆಡಳಿತ ವಿರೋಧಿಸುವವರ ಮೇಲೆ ಹಗೆ ತೀರಿಸಿಕೊಳ್ಳುವ ಯತ್ನ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಶುಲ್ಕ ಸಂಗ್ರಹಿಸುವವರು ಹೆಚ್ಚಿನ ಶುಲ್ಕ ಪಡೆಯುತ್ತಿದ್ದಾರೆ ಎಂಬ ಆರೋಪದಡಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಅಧಿಕಾರಿಗಳ ಸಹಿತ ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತಿದ್ದ ಸಂದರ್ಭ ಬಿಲ್ಲಿಂಗ್ ಯಂತ್ರ ಕಸಿದುಕೊಂಡು ಅಧಿಕಾರಿಗಳಿಗೆ ನೀಡಿದ ಮಾತ್ರಕ್ಕೆ ನಗರಸಭೆ ಸದಸ್ಯ ಉಮೇಶ್ ಸುಬ್ರಮಣಿ, ಮಡಿಕೇರಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕವನ್ ಕಾವೇರಪ್ಪ ಹಾಗೂ ಬೂತ್ ಅಧ್ಯಕ್ಷ ಗಿರೀಶ್ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ಸಂದರ್ಭ ಕವನ್ ಕಾವೇರಪ್ಪ ಸ್ಥಳದಲ್ಲಿ ಇರಲಿಲ್ಲ. ಅವರನ್ನು ಸಿಲುಕಿಸುವ ಕೆಲಸವಾಗಿದೆ. ಬಿಜೆಪಿ ಕಾರ್ಯಕರ್ತರು, ನಾಯಕರನ್ನು ಗುರಿ ಮಾಡಿ ಮೊಕದ್ದಮೆ ದಾಖಲಿಸಲಾಗಿದೆ. ಈ ಸಂಬAಧ ಸಿಸಿ ಕ್ಯಾಮರ ದೃಶ್ಯಾವಳಿಗಳಿದ್ದು, ದರೋಡೆ ಎಂದು ಸುಳ್ಳು ಪ್ರಕರಣ ದಾಖಲಿಸಿ ಬೆದರಿಸುವ ತಂತ್ರ ನಡೆಯುತ್ತಿದೆ. ಈ ಹಿಂದೆಯೂ ಪ್ರತಿಕೃತಿ ದಹನ ಮಾಡಿದಕ್ಕಾಗಿ ಬಿಜೆಪಿಯ ೩೦ ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದ ಅವರು, ವಿನಯ್ ಸೋಮಯ್ಯ ಸಾವಿನ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವವರಿಗೆ ಕೇವಲ ವಿಚಾರಣೆ ಮಾಡಿ ಬಿಡುಗಡೆಗೊಳಿಸಲಾಯಿತು. ವ್ಯವಸ್ಥೆಯನ್ನು ಪ್ರಶ್ನಿಸಿದ ಬಿಜೆಪಿಗರನ್ನು ಬಂಧನ ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಎಸ್.ಪಿ. ಕಚೇರಿಗೆ ಘೇರಾವ್ ಎಚ್ಚರಿಕೆ
ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದ್ವೇಷ ರಾಜಕಾರಣ ನಡೆಯುತ್ತಿದ್ದು, ಹೀಗೆ ಮುಂದುವರೆದರೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಎಚ್ಚರಿಸಿದರು.
ಜಿಲ್ಲೆಯಲ್ಲಿ ೨೫ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ಈ ರೀತಿ ವರ್ತನೆ ತೋರಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಇದೀಗ ಜನಾಂಗೀಯ ಸಂಘರ್ಷ, ಅಪರಾಧ ಪ್ರಕರಣಗಳು ಹೆಚ್ಚಾಗಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವಾಹನ ಪಾರ್ಕಿಂಗ್ ವಿಚಾರವನ್ನು ಪ್ರಶ್ನಿಸಿದ್ದಕ್ಕೆ ದರೋಡೆ ಕೇಸ್ ದಾಖಲಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ಇದು ಪೊಲೀಸ್ ಇಲಾಖೆಗೆ ನಾಚಿಕೆಗೇಡಿನ ವಿಚಾರವಾಗಿದೆ. ಈ ವಿದ್ಯಮಾನಗಳ ಬಗ್ಗೆ ಗೃಹ ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಜಿಲ್ಲೆಯಲ್ಲಿ ಹಾಸನ ರೀತಿಯ ರಾಜಕಾರಣ ಸೃಷ್ಟಿಯಾಗಿದ್ದು, ಇದರ ವಿರುದ್ಧ ಬಿಜೆಪಿ ಬೀದಿಗಿಳಿದು ಪ್ರತಿಭಟಿಸಲಿದೆ ಎಂದರು.
ಇದೀಗ ಬಂಧನವಾಗಿರುವವರು ರೂ. ೫೦ ಸಾವಿರ ದರೋಡೆ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಯಾವುದೇ ಹಣವನ್ನು ಕಸಿದಿಲ್ಲ. ಬಿಲ್ಲಿಂಗ್ ಯಂತ್ರವನ್ನು ಕಸಿದು ನಗರಸಭೆ ಸಿಬ್ಬಂದಿಗಳಿಗೆ ನೀಡಿದ್ದಾರೆ. ಬೇನಾಮಿ ಹೆಸರಿನಲ್ಲಿ ಕಾಂಗ್ರೆಸ್ಸಿಗರೊಬ್ಬರು ಟೆಂಡರ್ ಪಡೆದಿರುವ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ ಎಂದು ದೂರಿದರು.
ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಈ ಸಂದರ್ಭ ತಾನು ಸ್ಥಳದಲ್ಲೇ ಇದ್ದೆ. ಗಾಂಧಿ ಮೈದಾನದೊಳಗೆ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಗುತ್ತಿಗೆ ಪಡೆದವರಿಗೆ ಕಾರ್ಯಾದೇಶ ನೀಡುವ ಸಂದರ್ಭ ಈ ಷರತ್ತನ್ನು ವಿಧಿಸಲಾಗಿತ್ತು. ಆದರೂ ನಿಯಮ ಮೀರಿ ಪಾರ್ಕಿಂಗ್‌ಗೆ ಅವಕಾಶ ನೀಡಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪದ ಮೇಲೆ ಅಧಿಕಾರಿಗಳ ಸಹಿತ ಸ್ಥಳಕ್ಕೆ ತೆರಳಿದ ಸಂದರ್ಭ ಸುಳ್ಳು ಆರೋಪ ಹೊರಿಸಿ ನಗರಸಭಾ ಸದಸ್ಯ ಸೇರಿದಂತೆ ಕಾಂಗ್ರೆಸ್ ಪ್ರಮುಖರನ್ನು ಬಂಧಿಸಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗೂ ಉಮೇಶ್ ಸುಬ್ರಮಣಿ ಅವರು ಈ ಕುರಿತು ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದರು. ಕವನ್ ಈ ಸಂದರ್ಭ ಸ್ಥಳದಲ್ಲಿ ಇರಲಿಲ್ಲ. ಅವರು ಇದ್ದರು ಎಂದು ಪೊಲೀಸ್ ಇಲಾಖೆ ಸಾಬೀತುಪಡಿಸಲಿ ಎಂದು ಸವಾಲೆಸೆದ ಅವರು, ಬಿಜೆಪಿ ಕಾರ್ಯಕರ್ತರ ಮನೋಸ್ಥೆöÊರ್ಯ ಕುಗ್ಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ನಗರಸಭಾ ಸದಸ್ಯ ಅರುಣ್ ಶೆಟ್ಟಿ ಅವರನ್ನು ಕರೆಸಿ ಮುಚ್ಚಳಕೆ ಬರೆಸಿಕೊಳ್ಳಲಾಗಿದೆ. ಪೊಲೀಸರು ತಮಗಿರುವ ಒತ್ತಡದ ಬಗ್ಗೆ ನೇರವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದರು.
ರೂ. ೩೨ ಲಕ್ಷ ಟೆಂಡರ್ ಮೊತ್ತ ಪೈಕಿ ಕೇವಲ ರೂ. ೧೦ ಲಕ್ಷ ಸಂದಾಯವಾಗಿದೆ. ಗುತ್ತಿಗೆಯನ್ನು ರದ್ದು ಮಾಡುವ ಎಲ್ಲಾ ಅವಕಾಶಗಳು ನಗರಸಭೆಗಿದೆ ಎಂದು ಮಹೇಶ್ ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ತಳೂರು ಕಿಶೋರ್ ಕುಮಾರ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ನಗರಸಭಾ ಅಧ್ಯಕ್ಷೆ ಕಲಾವತಿ ಹಾಜರಿದ್ದರು.