ಕುಶಾಲನಗರ, ಮೇ. ೧೨: ಈ ಬಾರಿ ಮಳೆಗಾಲದಲ್ಲಿ ಮಳೆ ಪ್ರಮಾಣದ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಭೂ ಸರ್ವೇಕ್ಷಣ ನಿವೃತ್ತ ವಿಜ್ಞಾನಿ ಡಾ ಎಚ್.ಎಸ್.ಎಂ. ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಅಧ್ಯಯನದ ಆಧಾರದ ಮೇಲೆ ಭಾರತದ ಸುತ್ತಮುತ್ತಲಿರುವ ಕೆಲವು ಜ್ವಾಲಾಮುಖಿಗಳ ಚಟುವಟಿಕೆಗಳು ನಿಷ್ಕಿçಯವಾಗಿರುವುದರಿಂದ ಸಾಕಷ್ಟು ಆವಿ ವಾಯುಪದರಕ್ಕೆ ಸೇರ್ಪಡೆಯಾಗುತ್ತಿಲ್ಲ. ಆವಿಯ ಕೊರತೆಯಿಂದಾಗಿ ಮುಂಗಾರು ಅವಧಿಯಲ್ಲಿ ಸಾಕಷ್ಟು ಮಳೆಯಾಗದೆ ಸ್ವಲ್ಪ ಮಟ್ಟಿನ ಕೊರತೆಯಾಗುವ ಸಂಭವವಿದೆ ಎಂದು ಮಾಹಿತಿ ನೀಡಿದ್ದಾರೆ.

ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕೆಲವು ಬಾರಿ ಹೆಚ್ಚಿನ ಪ್ರಮಾಣದ ಮಳೆ ಸುರಿದರೂ ಒಟ್ಟಾರೆಯಾಗಿ ಮುಂಗಾರು ಅವಧಿಯಲ್ಲಿ ಸರಾಸರಿಯಲ್ಲಿ ಮಳೆ ಕೊರತೆ ಆಗುವ ಸಾಧ್ಯತೆ ಹೆಚ್ಚಿದೆ.

ಈ ಸಾಲಿನಲ್ಲಿ ಕೊಡಗು ಸೇರಿದಂತೆ ಕೇರಳ ಪ್ರಾಂತ್ಯಗಳಲ್ಲಿ ಪ್ರವಾಹ ಮತ್ತು ಭೂ ಕುಸಿತಗಳ ಆತಂಕವಿಲ್ಲ ಎಂದು ತಿಳಿಸಿರುವ ಪ್ರಕಾಶ್, ಸಣ್ಣ ಪ್ರಮಾಣದ ಘಟನೆಗಳು ಸಂಭವಿಸಬಹುದು. ಉತ್ತರ ಕರ್ನಾಟಕದಲ್ಲಿಯೂ ಪ್ರವಾಹದ ಭೀತಿ ಇರುವುದಿಲ್ಲ ಎಂದಿದ್ದಾರೆ.

ಕರಾವಳಿಯಲ್ಲಿ ಪ್ರತಿ ವರ್ಷದ ಹೆಚ್ಚಿನ ಮಳೆ ಇರುತ್ತದೆ. ಅನಿರೀಕ್ಷಿತವಾಗಿ ಅರಬ್ಬಿ ಸಮುದ್ರದ ತಳದಲ್ಲಿ ಜ್ವಾಲಾಮುಖಿ ಸ್ಫೋಟಗಳಾದಲ್ಲಿ ಜುಲೈ ಆಗಸ್ಟ್ ಅವಧಿಯಲ್ಲಿ ಈ ವರದಿಯನ್ನು ಮರು ಪರಿಶೀಲಿಸಬೇಕಾಗುತ್ತದೆ ಎಂದು ಡಾ.ಹೆಚ್.ಎಸ್.ಎಂ.ಪ್ರಕಾಶ್ ಮಾಹಿತಿ ನೀಡಿದ್ದಾರೆ.

-ಚಂದ್ರಮೋಹನ್