ಮುಳ್ಳೂರು, ಮೇ ೧೨: ಉರುಳಿಗೆ ಸಿಕ್ಕಿ ಮೃತ ಪಟ್ಟ ಚಿರತೆಯೊಂದರ ಕಳೇಬರ ಪತ್ತೆಯಾಗಿದೆ. ಸಮಿಪದ ಹಂಡ್ಲಿ ಗ್ರಾ.ಪಂ.ಗೆ ಸೇರಿದ ಹುಲುಕೋಡು ಗ್ರಾಮದ ಮಂಜುನಾಥ್ ಎಂಬವರಿಗೆ ಸೇರಿದ ಗದ್ದೆಯ ಮೇಲ್ಭಾಗದಲ್ಲಿರುವ ತೋಟದಲ್ಲಿ ಉರುಳಿಗೆ ಸುಮಾರು ೧೨ ವರ್ಷ ಪ್ರಾಯದ ಚಿರತೆಯೊಂದು ಸಿಕ್ಕಿ ಮೃತಪಟ್ಟಿದೆ.
ಚಿರತೆ ಐದಾರು ದಿನಗಳ ಹಿಂದೆ ಉರುಳಿಗೆ ಸಿಕ್ಕಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಚಿರತೆಯ ಕಳೇಬರ ಇರುವುದನ್ನು ಗಮನಿಸಿದ ಗ್ರಾಮಸ್ಥರು ಸೋಮವಾರ ಮಧ್ಯಾಹ್ನ ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಆರ್‌ಎಫ್‌ಒ ಪೂಜಶ್ರೀ, ಇಲಾಖೆ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದರು. ಶನಿವಾರಸಂತೆ ಪಶುವೈದ್ಯಾಧಿಕಾರಿ ಡಾ.ಸತೀಶ್ ಚಿರತೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅರಣ್ಯ ಅಧಿಕಾರಿಗಳು ಚಿರತೆಯ ಶವವನ್ನು ಸುಟ್ಟು ಹಾಕುವ ಮೂಲಕ ಅಂತ್ಯ ಸಂಸ್ಕಾರ ನಡೆಸಿದರು.