ಸೋಮವಾರಪೇಟೆ, ಮೇ ೧೨: ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇನ್ನಿಲ್ಲದಂತೆ ಕಾಡುತ್ತಿದ್ದು, ಇರುವ ವೈದ್ಯರುಗಳು ಭಾರೀ ಒತ್ತಡದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಹಿಂದಿನ ಅವಧಿಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿತ್ತು. ವೈದ್ಯರು ಯಾವುದೇ ಒತ್ತಡವಿಲ್ಲದೆ ಕೆಲಸ ಮಾಡುತ್ತಿದ್ದರು. ಇದೀಗ ವೈದ್ಯರ ಕೊರತೆ ಕಾಡುತ್ತಿದ್ದು, ಇರುವ ವೈದ್ಯರು ದಿನವೊಂದಕ್ಕೆ ೩೦೦ ರಿಂದ ೪೦೦ ರೋಗಿಗಳನ್ನು ತಪಾಸಣೆ ನಡೆಸಬೇಕಾದ ಸ್ಥಿತಿ ಸೃಷ್ಟಿಯಾಗಿದೆ.

ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯು ಬೃಹತ್ ಕಟ್ಟಡ, ಇನ್ನಿತರ ಸೌಲಭ್ಯಗಳನ್ನು ಹೊಂದಿದ್ದು, ಅತೀ ಅಗತ್ಯವಾಗಿ ಇರಬೇಕಾದ ವೈದ್ಯರುಗಳೇ ಇಲ್ಲವಾಗಿದ್ದಾರೆ. ಆಸ್ಪತ್ರೆಗೆ ೧೩ ಮಂದಿ ಖಾಯಂ ವೈದ್ಯರು ನಿಯೋಜನೆಯಾಗಬೇಕಿದ್ದರೂ ಪ್ರಸ್ತುತ ೪ ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಡಿ. ಗ್ರೂಪ್ ನೌಕರರಿಂದ ಹಿಡಿದು ಶುಶ್ರೂಷಕರು, ಇತರ ಅಧಿಕಾರಿಗಳು, ಸಿಬ್ಬಂದಿಗಳ ೪೦ಕ್ಕೂ ಅಧಿಕ ಹುದ್ದೆಗೆ ನಿಯೋಜನೆಯಾಗಿಲ್ಲ. ಹೊರಗುತ್ತಿಗೆ ಆಧಾರದ ಮೇರೆ ಕೆಲ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇರುವ ವೈದ್ಯರು ಹಾಗೂ ಸಿಬ್ಬಂದಿಗಳು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.

ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯವರು ಪ್ರತಿಭಟನೆಯ ಎಚ್ಚರಿಕೆ ನೀಡಿದ ಹಿನ್ನೆಲೆ ಕೆಲವೊಂದಿಷ್ಟು ಸಮಸ್ಯೆಗಳು ಬಗೆಹರಿದಿವೆ. ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಯವರು ಇತರ ಅಧಿಕಾರಿ, ಸಿಬ್ಬಂದಿಗಳು, ವೈದ್ಯರೊಂದಿಗೆ ಅಸಹಕಾರದ ಧೋರಣೆ ಅನುಸರಿಸುತ್ತಿದ್ದರಿಂದ ಡಿಹೆಚ್‌ಓ ಅವರು, ಸಹಾಯಕ ಆಡಳಿತಾಧಿಕಾರಿಗಳಿಗೆ ಒಂದು ತಿಂಗಳ ಕಾಲ ಕಡ್ಡಾಯ ರಜೆ ನೀಡಿ ಕಳುಹಿಸಿದ್ದಾರೆ.

ಆಸ್ಪತ್ರೆಯ ಅವ್ಯವಸ್ಥೆ, ರೋಗಿಗಳ ಪರದಾಟದ ಬಗ್ಗೆ ಮಾಹಿತಿ ಪಡೆದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಡಳಿತ ವೈದ್ಯಾಧಿಕಾರಿ ಡಾ. ಜಮೀರ್ ಅಹ್ಮದ್ ಅವರೊಂದಿಗೆ ಮಾತುಕತೆ ನಡೆಸಿ, ವಾಸ್ತವಾಂಶದ ಮಾಹಿತಿ ಪಡೆದಿದ್ದಾರೆ.

ಕ್ಷೇತ್ರದ ಶಾಸಕರು ಸ್ವತಃ ವೈದ್ಯರಾಗಿದ್ದರೂ ಸಹ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆಗೆ ಇತಿಶ್ರೀ ಹಾಡುವಲ್ಲಿ ಯಶಸ್ಸು ಸಾಧಿಸಿಲ್ಲ ಎಂದು ವಿಪಕ್ಷಗಳ ಪ್ರಮುಖರು ಟೀಕಿಸಿದ್ದಾರೆ. ಶಾಸಕ ಡಾ. ಮಂತರ್ ಗೌಡ ಅವರೂ ಸಹ ಹಲವು ಬಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ರಕ್ಷಾ ಸಮಿತಿಯ ಸಭೆಗಳನ್ನೂ ನಡೆಸಿದ್ದಾರೆ. ಆದರೂ ಕೂಡ ಆಸ್ಪತ್ರೆಯನ್ನು ಬಾಧಿಸುತ್ತಿರುವ ವೈದ್ಯರ ಕೊರತೆಯೆಂಬ ಖಾಯಿಲೆಗೆ ಮದ್ದು ಕಂಡು ಹಿಡಿಯುವಲ್ಲಿ ಸಫಲತೆ ಸಾಧಿಸಿಲ್ಲ. ಈ ಬಗ್ಗೆ ಇನ್ನಷ್ಟು ಗಮನ ಹರಿಸಬೇಕಾದ ಅಗತ್ಯತೆ ಹೆಚ್ಚಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.

ಆರೋಗ್ಯ ಸಚಿವರ ಗಮನಕ್ಕೆ ಆಸ್ಪತ್ರೆಯ ಅವ್ಯವಸ್ಥೆ: ಅಪ್ಪಚ್ಚು ರಂಜನ್

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಆಸ್ಪತ್ರೆಯಲ್ಲಿ ರೋಗಿಗಳ ಸರತಿ ಸಾಲು ಕಂಡು ದಂಗಾದರು. ಸಂತೆ ದಿನವಾದ ಸೋಮವಾರದಂದು ಗ್ರಾಮೀಣ ಭಾಗದಿಂದ ೪೦೦ಕ್ಕೂ ಅಧಿಕ ಮಂದಿ ವಿವಿಧ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದು, ವೈದ್ಯರ ಕೊರತೆಯಿಂದ ಗಂಟೆಗಟ್ಟಲೆ ಕಾಯುತ್ತಿದ್ದ ದೃಶ್ಯವನ್ನು ಗಮನಿಸಿ, ಆಡಳಿತ ವೈದ್ಯಾಧಿಕಾರಿ ಜಮೀರ್ ಅವರೊಂದಿಗೆ ಮಾಹಿತಿ ಪಡೆದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಂಜನ್, ಹಿಂದಿನ ಅವಧಿಯಲ್ಲಿ ಇಲ್ಲಿನ ಆಸ್ಪತ್ರೆಗೆ ೧೩ ವೈದ್ಯರನ್ನು ನೇಮಕ ಮಾಡಿದ್ದೆವು. ಮೆಡಿಕಲ್ ಕಾಲೇಜಿನಿಂದಲೂ ಓರ್ವ ಅನಸ್ತೇಷಿಯಾ ವೈದ್ಯರನ್ನು ನಿಯೋಜನೆ ಮಾಡಲಾಗಿತ್ತು. ವಾರದ ಎರಡು ದಿನ ಇಲ್ಲಿಗೆ ಬರುತ್ತಿದ್ದರು. ಓರ್ವ ರೆಡಿಯಾಲಜಿಸ್ಟ್ಗೆ ಮಾಸಿಕ ೧.೬೦ ಲಕ್ಷ ಸಂಬಳ ನೀಡಿ ನಿಯೋಜನೆ ಮಾಡಲಾಗಿತ್ತು. ಸರ್ಕಾರ ಬದಲಾದಂತೆ; ವೈದ್ಯರುಗಳೂ ಇಲ್ಲಿಂದ ಹೋಗಿದ್ದಾರೆ. ಸ್ಕಾö್ಯನಿಂಗ್ ಯಂತ್ರಗಳನ್ನು ಮಡಿಕೇರಿಗೆ ಕಳುಹಿಸಲಾಗಿದೆ. ತನ್ನ ಅವಧಿಯಲ್ಲಿ ವೈದ್ಯರುಗಳು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದರು. ಇಷ್ಟೊಂದು ಉತ್ತಮ ಸ್ಥಿತಿಯಲ್ಲಿದ್ದ ಆಸ್ಪತ್ರೆಯನ್ನು ಈಗಿನ ಜನಪ್ರತಿನಿಧಿಗಳು ಕಡೆಗಣಿಸಬಾರದು ಎಂದು ಒತ್ತಾಯಿಸಿದರು.

ಸರ್ಕಾರ ಹಾಗೂ ಶಾಸಕರು ಆರೋಗ್ಯ ಮತ್ತು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಇಲ್ಲಿ ವೈದ್ಯರ ಕೊರತೆ ಹೆಚ್ಚು; ರೋಗಿಗಳ ಸಂಖ್ಯೆಯೂ ಹೆಚ್ಚು ಎಂಬAತಾಗಿದೆ. ಆಸ್ಪತ್ರೆಯ ಇಂದಿನ ಸ್ಥಿತಿ ಬದಲಾಗಿದೆ. ರೋಗಿಗಳ ಪರಿಸ್ಥಿತಿ ಹದಗೆಟ್ಟಿದೆ. ಜನಪ್ರತಿನಿಧಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆದಷ್ಟು ಬೇಗ ವೈದ್ಯರ ನಿಯೋಜನೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ತಾನೂ ಕೂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮನವಿ ನೀಡಿದ್ದೆ. ಆದರೆ ಈವರೆಗೆ ಏನೂ ಪ್ರಯೋಜನ ಆಗಿಲ್ಲ. ಮತ್ತೊಮ್ಮೆ ಸಚಿವರ ಗಮನಕ್ಕೆ ತರಲಾಗುವುದು. ಕಾರ್ಮಿಕರು ಮತ್ತು ರೈತರು ಹೆಚ್ಚಿರುವ ಪ್ರದೇಶವಾಗಿರುವ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಕನಿಷ್ಟ ೮ ಮಂದಿ ವೈದ್ಯರನ್ನಾದರೂ ಸರ್ಕಾರ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಎಸ್.ಆರ್. ಸೋಮೇಶ್, ಕೆ.ಕೆ. ಸುಧಾಕರ್, ಶರತ್‌ಚಂದ್ರ, ಆನಂದ್ ಕಿಬ್ಬೆಟ್ಟ, ಯೋಗೇಶ್ ಮಾಟ್ನಳ್ಳಿ, ಚಂದ್ರಶೇಖರ್ ಅವರುಗಳು ಇದ್ದರು.