ವೀರಾಜಪೇಟೆ, ಮೇ ೭: ಎಸ್ಎಸ್ಎಲ್ಸಿ ಪರೀಕ್ಷೇಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ವೀರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿ ಟಿ.ಎಂ. ಆಶ್ರಯ ಅಕ್ಕಮ್ಮ ಅವರನ್ನು ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಪಿ.ಎನ್. ವಿನೋದ್ ಮಾತನಾಡಿ, ಈ ಬಾರಿಯ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿ ಆಶ್ರಯ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಹಾಗೂ ರಾಜ್ಯಕ್ಕೆ ಐದನೇ ಸ್ಥಾನ ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾಳೆ. ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಶ್ರಮವನ್ನು ಕೂಡ ಸ್ಮರಿಸಬೇಕಿದೆ ಎಂದರು.
ಇದೇ ಸಂದರ್ಭ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ ಪಿ.ಎಸ್. ದೇವಯ್ಯ ಹಾಗೂ ತೃತೀಯ ಸ್ಥಾನ ಪಡೆದ ಸಮೃದ್ದಿ ಕೆ.ಟಿ. ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಮಾಡಲಾಯಿತು.
ವಿದ್ಯಾರ್ಥಿ ಆಶ್ರಯ ಮಾತನಾಡಿ, ತನಗೆ ಉತ್ತಮ ಅಂಕ ಗಳಿಸಲು ಸಹಕರಿಸಿದ ಶಿಕ್ಷಕರು ಹಾಗೂ ಪೋಷಕರ ಪಾತ್ರವನ್ನು ಸ್ಮರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಮಾತನಾಡಿದರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ವಿದ್ಯಾರ್ಥಿ ಆಶ್ರಯ ಅವರ ಪೋಷಕರು ಇದ್ದರು.