ವೀರಾಜಪೇಟೆ, ಮೇ ೭: ಪಟ್ಟಣದ ಸುಂಕದಕಟ್ಟೆಯಿAದ ಮೀನುಪೇಟೆವರೆಗೂ ರಸ್ತೆ ಅಭಿವೃದ್ಧಿ ಗೊಳಿಸುವಂತೆ ಒತ್ತಾಯಿಸಿ ನಾಗರಿಕ ಸಮಿತಿ ಮುಖಂಡರು, ಸದಸ್ಯರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಈ ಸಂದರ್ಭ ನಾಗರಿಕ ಸಮಿತಿಯ ಮುಖಂಡ ಡಾ. ಇ.ರಾ. ದುರ್ಗಾಪ್ರಸಾದ್ ಮಾತನಾಡಿ, ವೀರಾಜಪೇಟೆಯ ಮುಖ್ಯ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅತಿಯಾಗಿದ್ದು, ವಾಹನಗಳನ್ನು ಬೆಳಿಗ್ಗೆ ನಿಲ್ಲಿಸಿದರೆ ರಾತ್ರಿ ೧೦ ಗಂಟೆವರೆಗೂ ಅಲ್ಲೇ ನಿಂತಿರುತ್ತವೆ. ಇನ್ನು ಬ್ಯಾಂಕ್ ಕಚೇರಿಗಳಿಗಾಗಿ ಗ್ರಾಮೀಣ ಪ್ರದೇಶದಿಂದ ಬರುವವರಿಗೆ ತಮ್ಮ ವಾಹನಗಳನ್ನು ನಿಲ್ಲಿಸಲು ಜಾಗವಿರುವುದಿಲ್ಲ. ಇನ್ನು ಕೆಲವರು ರಸ್ತೆ ಬದಿ ವಾಹನ ನಿಲ್ಲಿಸಿ ದೂರದ ಊರಿಗೆ ತೆರಳಿ ರಾತ್ರಿ ಬರುತ್ತಾರೆ. ಆದ್ದರಿಂದ ಪುರಸಭೆ ಸುಂಕ ವಸೂಲಿ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ರಸ್ತೆಗೆ ಚರಂಡಿಗಳಿಲ್ಲ. ರಾಜ ಕಾಲುವೆ ದಂಡೆಗಳು ಅತಿಕ್ರಮಣಗೊಂಡಿರುವುದನ್ನು ತೆರವುಗೊಳಿಸಬೇಕು. ರಾಜ ಕಾಲುವೆಯಲ್ಲಿ ಶೌಚಾಲಯದ ನೀರು ಬಿಡುವುದರಿಂದ ಕೊಳಚೆ ನೀರು ಹರಿದು ಕಾವೇರಿ ನದಿಗೆ ಸೇರುತ್ತದೆ. ಇದರ ಬಗ್ಗೆ ಪುರಸಭೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪುರಸಭೆ ವ್ಯಾಪ್ತಿಯಲ್ಲಿರುವ ತೆರೆದ ಬಾವಿಗಳನ್ನು ಸ್ವಚ್ಛಪಡಿಸಿ ನೀರಿನ ಅಭಾವ ಸಂದರ್ಭ ಉಪಯೋಗಿಸಲು ಮತ್ತು ದುರಸ್ತಿಯಲ್ಲಿರುವ ಬೋರ್‌ವೆಲ್‌ಗಳನ್ನು ಸರಿಪಡಿಸಿ ಅಲ್ಲಿನ ನಿವಾಸಿಗಳಿಗೆ ಅನುಕೂಲವಾಗುವಂತೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ನಾಗರಿಕ ಸಮಿತಿ ಸದಸ್ಯರಾದ ಎನ್.ಕೆ. ಶರೀಫ್ ಮತ್ತು ಹೆಚ್.ಆರ್. ಶಿವಪ್ಪ ಉಪಸ್ಥಿತರಿದ್ದರು.