ಮಡಿಕೇರಿ, ಮೇ ೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ನಡೆದ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಧ್ಯಾತ್ಮಿಕ ಚಿಂತಕ ಯಸಳೂರು ಉದಯ ಕುಮಾರ್, ಶಂಕರಾಚಾರ್ಯರ ಜೀವನ, ಆದರ್ಶಗಳ ಬಗ್ಗೆ ವಿವರಿಸಿದರು.
‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಶಂಕರಾಚಾರ್ಯರ ಬೋಧನೆಯ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅದಕ್ಕೆ ಸಾರ್ಥಕತೆ ಇರುತ್ತದೆ. ವ್ಯಕ್ತಿಯಾಗಿ ವ್ಯಕ್ತಿತ್ವವನ್ನು ಇಟ್ಟುಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಮತ್ತು ಅಧ್ಯಾತಿಕತೆಯಲ್ಲಿ ಸಹ ತೊಡಗಿಸಿಕೊಳ್ಳಬೇಕು. ಆದಿ ಶಂಕರಾಚಾರ್ಯರು ೮ನೇ ಶತಮಾನದಲ್ಲಿ ಜೀವಿಸಿದಂತಹ ಅತ್ಯಂತ ಪ್ರಸಿದ್ಧವಾದಂತಹ ಒಬ್ಬ ತತ್ವಜ್ಞಾನಿ. ಇವರು ಕೇರಳ ಪ್ರಾಂತ್ಯದಲ್ಲಿದ್ದವರು ಎಂದು ಹೇಳಿದರು.
ಮಡಿಕೇರಿ ಬ್ರಾಹ್ಮಣ ಸಮಾಜದ ಎಸ್.ಎಸ್. ಸಂಪತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು.