ಇಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರಕಾರ
ನವದೆಹಲಿ, ಮೇ ೭: ಭಾರತೀಯ ಸೇನೆ ಬುಧವಾರ ಬೆಳಿಗ್ಗಿನ ಜಾವ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಇಂದು ಬೆಳಿಗ್ಗಿನ ಜಾವ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ಗುರುವಾರ ಸರ್ವಪಕ್ಷ ಸಭೆ ಕರೆದಿದೆ. ನಡೆಯುವ ಸರ್ವಪಕ್ಷ ಸಭೆಯ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕೇಂದ್ರ ಸರ್ಕಾರ ಮೇ ೮ ರಂದು ಬೆಳಿಗ್ಗೆ ೧೧ ಗಂಟೆಗೆ ದೆಹಲಿಯ ಸಂಸತ್ತಿನ ಗ್ರಂಥಾಲಯ ಕಟ್ಟಡದ ಸಮಿತಿ ಕೊಠಡಿಯಲ್ಲಿ ಸರ್ವಪಕ್ಷ ನಾಯಕರ ಸಭೆಯನ್ನು ಕರೆದಿದೆ ತಿಳಿಸಿದ್ದಾರೆ.
೨೬ ನಕ್ಸಲರ ಹತ್ಯೆ
ಬಿಜಾಪುರ, ಮೇ ೭: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಂದು ಭರ್ಜರಿ ಬೇಟೆಯಾಡಿದ್ದು, ೨೬ ನಕ್ಸಲರನ್ನು ಕೊಂದಿವೆ. ಪೊಲೀಸ್ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಕರ್ರೆಗುಟ್ಟ ಬೆಟ್ಟಗಳು ಮತ್ತು ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಬೆಟ್ಟಗಳಲ್ಲಿ ಏಪ್ರಿಲ್ ೨೧ರಂದು ‘ಮಿಷನ್ ಸಂಕಲ್ಪ' ಎಂಬ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ ಸುಮಾರು ೨೪ ಸಾವಿರ ಸೈನಿಕರು ಭಾಗಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯ ಭಾಗವಾಗಿ ಇಂದು ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ೨೬ ನಕ್ಸಲರು ಸಾವನ್ನಪ್ಪಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸೋಮವಾರ ಮುಂಜಾನೆ, ಭದ್ರತಾ ಪಡೆಗಳು ಸಮವಸ್ತ್ರ ಧರಿಸಿದ್ದ ಮಹಿಳಾ ನಕ್ಸಲೈಟ್ ಒಬ್ಬಳನ್ನು ಕೊಂದು ಸ್ಥಳದಿಂದ ಶಸ್ತಾçಸ್ತçಗಳನ್ನು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದವು.
೫ ಐಐಟಿಗಳ ವಿಸ್ತರಣೆಗೆ ಕೇಂದ್ರ ಅನುಮೋದನೆ
ನವದೆಹಲಿ, ಮೇ ೭: ರಾಜ್ಯದ ಧಾರವಾಡ ಐಐಟಿ ಸೇರಿದಂತೆ ದೇಶದ ಐದು ಐಐಟಿಗಳಲ್ಲಿ ರೂ. ೧೧,೮೨೮.೭೯ ಕೋಟಿ ವೆಚ್ಚದಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಜ್ಯದ ಧಾರವಾಡ ಐಐಟಿ ಹಾಗೂ ಆಂಧ್ರಪ್ರದೇಶ ತಿರುಪತಿ ಐಐಟಿ, ಛತ್ತೀಸ್‌ಗಢದ ಭಿಲಾಯಿ ಐಐಟಿ, ಜಮ್ಮು-ಕಾಶ್ಮೀರದ ಜಮ್ಮು ಐಐಟಿ ಮತ್ತು ಕೇರಳದ ಪಾಲಕ್ಕಾಡ್‌ಗಳಲ್ಲಿ ಸ್ಥಾಪಿಸಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಅನುಮೋದನೆ ನೀಡಿತು ಎಂದು ಹೇಳಿದ್ದಾರೆ. ಈ ಐದು ಪ್ರಮುಖ ಐಐಟಿಗಳಲ್ಲಿ ೬೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಸೌಲಭ್ಯಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, ಕೈಗಾರಿಕೆ-ಶೈಕ್ಷಣಿಕ ಸಂಪರ್ಕವನ್ನು ಬಲಪಡಿಸಲು ಐದು ಹೊಸ ಅತ್ಯಾಧುನಿಕ ಸಂಶೋಧನಾ ಪಾರ್ಕ್ಗಳು ಸಹ ಈ ಯೋಜನೆಯಲ್ಲಿ ಬರಲಿವೆ ಎಂದರು.
ಮಹೇಶ್ ಜೋಶಿಗೆ ಭದ್ರತೆ ನೀಡಲು ಕೋರ್ಟ್ ಆದೇಶ
ಬೆಂಗಳೂರು, ಮೇ ೭: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರಿಗೆ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಹಾಗೂ ಖಾಸಗಿ ಗನ್‌ಮ್ಯಾನ್ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮಹೇಶ್ ಜೋಶಿ ಅವರು ಸಲ್ಲಿಸಿದ ಅರ್ಜಿಯ ಕುರಿತು ಹೊರಡಿಸಲಾದ ನಿರ್ದೇಶನಗಳಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯದ ಮುಂದೆ ಇರಿಸಲಾದ ಬೆದರಿಕೆ ವಿಶ್ಲೇಷಣಾ ವರದಿಯನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಇತ್ತೀಚೆಗೆ ಈ ಆದೇಶವನ್ನು ಹೊರಡಿಸಿದ್ದಾರೆ. ಇತ್ತೀಚೆಗೆ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಂತರ, ಸಮ್ಮೇಳನಕ್ಕೂ ಮುನ್ನ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ ಸ್ಥಾಪಿತ ಹಿತಾಸಕ್ತಿಗಳಿಂದ ತನಗೆ ಜೀವಬೆದರಿಕೆ ಬರುತ್ತಿದೆ ಎಂದು ಮಹೇಶ್ ಜೋಶಿ ದೂರು ನೀಡಿದ್ದರು.
ಜಿ.ಎಸ್. ಸಿದ್ದಲಿಂಗಯ್ಯ ಇನ್ನಿಲ್ಲ
ಬೆಂಗಳೂರು, ಮೇ ೭: ಸಾಹಿತಿ ಜಿ.ಎಸ್. ಸಿದ್ದಲಿಂಗಯ್ಯ (೯೪) ಅವರು ವಯೋಸಹಜ ಅನಾರೋಗ್ಯದಿಂದಾಗಿ ನಿಧನರಾದರು. ತುಮಕೂರು ಜಿಲ್ಲೆ ಬೆಳ್ಳಾವಿಯ ಸಿದ್ದಲಿಂಗಯ್ಯ ಅವರು ಜನಿಸಿದ್ದು ೧೯೩೧ರಲ್ಲಿ. ಕಾಲೇಜು ಶಿಕ್ಷಣದವರೆಗಿನ ವಿದ್ಯಾಭ್ಯಾಸವನ್ನು ಊರಿನಲ್ಲಿ ಪೂರೈಸಿದರು. ನಂತರ ಬಿಎ (ಆನರ್ಸ್), ಎಂ.ಎ ಕನ್ನಡದಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಉದ್ಯೋಗ ಆರಂಭಿಸಿದರು. ಮುಂದೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಸಾಹಿತಿ, ಕವಿ ಹಾಗೂ ವಿಮರ್ಶಕರಾಗಿದ್ದ ಸಿದ್ದಲಿಂಗಯ್ಯನವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ರಾಹುಲ್ ಗಾಂಧಿಗೆ ನೋಟಿಸ್ ಜಾರಿ
ಸಂಭಲ್, ಮೇ ೭: ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತ ಸರ್ಕಾರದ (ಇಂಡಿಯನ್ ಸ್ಟೇಟ್) ವಿರುದ್ಧ ಹೋರಾಡುತ್ತಿದ್ದೇವೆ ಎಂಬ ಹೇಳಿಕೆಗೆ ಸಂಬAಧಿಸಿ ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು ಬುಧವಾರ ನೋಟಿಸ್ ಜಾರಿ ಮಾಡಿದೆ. ಹಿಂದೂ ಶಕ್ತಿ ದಳದ ರಾಷ್ಟಿçÃಯ ಅಧ್ಯಕ್ಷ ಸಿಮ್ರಾನ್ ಗುಪ್ತಾ ಅವರು ಸಲ್ಲಿಸಿದ ದೂರಿನ ಮೇರೆಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಆರತಿ ಫೌಜ್ಜಾರ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. ನ್ಯಾಯಾಲಯವು ಈ ಹಿಂದೆ ರಾಹುಲ್ ಗಾಂಧಿ ಅವರನ್ನು ಏಪ್ರಿಲ್ ೪ ರಂದು ಹಾಜರಾಗುವಂತೆ ಹೇಳಿತ್ತು. ಬಳಿಕ ಅವರು ಪ್ರತಿಕ್ರಿಯೆ ನೀಡಲು ಮೇ ೭ ರವರೆಗೆ ದಿನಾಂಕವನ್ನು ವಿಸ್ತರಿಸಿತ್ತು. ಆದರೆ, ಬುಧವಾರ ರಾಹುಲ್ ಪರ ವಕೀಲರು ಗೈರುಹಾಜರಾದ ಕಾರಣ, ಕಿರಿಯ ವಕೀಲರು ಹೊಸ ದಿನಾಂಕವನ್ನು ಕೋರಿದ್ದಾರೆ. ಅದನ್ನು ಸ್ವೀಕರಿಸಿದ ನ್ಯಾಯಾಲಯವು ಜೂನ್ ೧೬ ರಂದು ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ.
೨೦೨೭ರಲ್ಲಿ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ : ಮೋದಿ
ನವದೆಹಲಿ, ಮೇ ೭: ಭಾರತದ ಚೊಚ್ಚಲ ಮಾನವಸಹಿತ ಬಾಹ್ಯಾಕಾಶ ಗಗನಯಾನವನ್ನು ೨೦೨೭ರ ಆರಂಭದಲ್ಲಿ ಮಾಡುವ ನಿರೀಕ್ಷೆಯಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ತಿಳಿಸಿದರು. ೨೦೩೫ರ ವೇಳೆಗೆ ಭಾರತದಲ್ಲಿ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮತ್ತು ೨೦೪೦ರ ವೇಳೆಗೆ ಚಂದ್ರನ ಬಳಿ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆಗಳನ್ನು ಪಟ್ಟಿ ಮಾಡಲಾಗಿದೆ ಎಂದು ಜಾಗತಿಕ ಬಾಹ್ಯಾಕಾಶ ಅನ್ವೇಷಣೆ ಸಮ್ಮೇಳನಕ್ಕೆ ನೀಡಿದ ಧ್ವನಿಮುದ್ರಿತ ಸಂದೇಶದಲ್ಲಿ ಮೋದಿ ತಿಳಿಸಿದ್ದಾರೆ. ಭಾರತದ ಬಾಹ್ಯಾಕಾಶ ಪ್ರಯಾಣವು ಇತರರೊಂದಿಗೆ ಸ್ಪರ್ಧಿಸುವುದಲ್ಲ. ಬದಲಿಗೆ, ಒಟ್ಟಾಗಿ ಎತ್ತರಕ್ಕೆ ತಲುಪುವುದು. ಭಾರತ ಶೀಘ್ರದಲ್ಲೇ ಜಿ ೨೦ ಉಪಗ್ರಹವನ್ನು ಉಡಾವಣೆ ಮಾಡಲಿದೆ ಎಂದೂ ಅವರು ಹೇಳಿದ್ದಾರೆ.