ಸಿದ್ದಾಪುರ, ಮೇ ೨: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಒತ್ತಾಯಿಸಿ ತಾ. ೨೦ ರಂದು ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ದೇಶವ್ಯಾಪ್ತಿ ಮುಷ್ಕರ ಹಾಗೂ ಪ್ರತಿಭಟನೆಗಳು ನಡೆಸಲಾಗುವುದೆಂದು ಸಿಐಟಿಯು ಸಂಘಟನೆಯ ರಾಜ್ಯಾಧ್ಯಕ್ಷೆ ಎಸ್. ವರಲಕ್ಷಿö್ಮ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು ಕನಿಷ್ಟ ವೇತನವನ್ನು ನೀಡದೆ ಬಂಡವಾಳ ಶಾಹಿಗಳ ಪರ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು. ದೇಶ ವ್ಯಾಪ್ತಿಯಲ್ಲಿ ದಿನನಿತ್ಯ ಬಳಸುವ ವಸ್ತುಗಳ ಬೆಲೆಯೂ ಗಗನಕ್ಕೇರಿದೆ ಎಂದ ಅವರು ಜನಸಾಮಾನ್ಯರು ಬದುಕುವುದೇ ಕಷ್ಟಕರವಾಗಿದೆ ಎಂದರು. ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಆಗಿಂದಾಗೆ ತಿದ್ದುಪಡಿ ಮಾಡುತ್ತಾ ಕಾರ್ಮಿಕರ ಮೇಲೆ ಗದಾ ಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿದರು. ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಾರ್ಮಿಕರ ಜೀವನ ದುಸ್ತರವಾಗಿದೆ ಎಂದು ತಿಳಿಸಿದರು. ಕಾರ್ಮಿಕರಿಗೆ ಕನಿಷ್ಠ ವೇತನ ರೂ. ೬೦೦ ನೀಡಬೇಕೆಂದು ಅವರು ಒತ್ತಾಯಿಸಿದರು.
ಈ ಹಿಂದೆ ಇದ್ದಂತ ಎಂಟು ಗಂಟೆಗಳ ಕಾಲ ಕೆಲಸವನ್ನು ಇದೀಗ ೧೨ ಗಂಟೆಗಳ ಕಾಲ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡ ಕಾರ್ಮಿಕರಿಗೂ ನೀಡುತ್ತಿರುವ ಸೌಲಭ್ಯವನ್ನು ಕಡಿತಗೊಳಿಸಿದ್ದು ಕಾಫಿ ತೋಟದೊಳಗೆ ಕಾಡಾನೆಗಳ ಹಾವಳಿಯ ನಡುವೆ ಕಾರ್ಮಿಕರು ಭಯದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ದೇಶ ವ್ಯಾಪ್ತಿಯ ಕಾರ್ಮಿಕರು ತಾ. ೨೦ ರಂದು ತಮ್ಮ ಸೇವೆ ಹಾಗೂ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ಹಾಗೂ ಹೋರಾಟಗಳನ್ನು ಮಾಡಲಿದ್ದಾರೆ ಎಂದು ವರಲಕ್ಷ್ಮಿ ಅವರು ಮಾಹಿತಿ ನೀಡಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎ.ಸಿ. ಸಾಬು ಮಾತನಾಡಿ, ೧೭ ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ತಾ. ೨೦ ರಂದು ದೇಶ ವ್ಯಾಪ್ತಿ ಕಾರ್ಮಿಕರು ನಡೆಸುತ್ತಿರುವ ಮುಷ್ಕರಕ್ಕೆ ಕೊಡಗು ಜಿಲ್ಲೆಯಿಂದ ಕೂಡ ಬೆಂಬಲ ವ್ಯಕ್ತಪಡಿಸಿದ್ದು. ಜಿಲ್ಲೆಯಲ್ಲಿ ಕೂಡ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ಪಿ.ಆರ್. ಭರತ್, ಮಹಾದೇವ. ಧರ್ಮೇಶ್ ಎನ್.ಡಿ., ಕುಟ್ಟಪ್ಪ ಎನ್., ಮಣಿ ಹೆಚ್.ಬಿ., ರಮೇಶ್ ಹಾಜರಿದ್ದರು.