ಮಡಿಕೇರಿ, ಮೇ ೨: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಹಾಗೂ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಸಂಘಟನೆಗಳು ನಗರದಲ್ಲಿ ಗುರುವಾರ ಸಂಜೆ ಮೊಂಬತ್ತಿ ಹಾಗೂ ಪಂಜು ಮೆರವಣಿಗೆ ನಡೆಸಿದರು.

ಇಲ್ಲಿನ ಇಂದಿರಾಗಾAಧಿ ವೃತ್ತ (ಚೌಕಿ)ಯಿಂದ ಆರಂಭಿಸಿ ನಗರದ ಸ್ಕಾ÷್ವರ್ಡನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದವರೆಗೆ ಮೆರವಣಿಗೆ ನಡೆಸಿ ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ನಂತರ, ಮಾನವ ಸರಪಳಿ ರಚಿಸಲಾಯಿತು.

ಈ ವೇಳೆ ಮಾತನಾಡಿದ ಕೋದಂಡ ರಾಮೋತ್ಸವ ಸಮಿತಿ ಅಧ್ಯಕ್ಷ ಕೆಎಂಬಿ ಗಣೇಶ್, ಯಾವುದೇ ಕಾರಣಕ್ಕೂ ಈ ಘಟನೆಗೆ ಕಾರಣರಾದವರಿಗೆ ಕ್ಷಮೆ ಕೊಡಕೂಡದು. ಭಯೋತ್ಪಾದಕರನ್ನು ಹುಡುಕಿ ಕೊಲ್ಲಬೇಕು ಎಂದು ಒತ್ತಾಯಿಸಿದರು.

ಭಾರತ ಶಾಂತಿಪ್ರಿಯದೇಶ. ಸುತ್ತಮುತ್ತ ಇರುವ ದೇಶಗಳು ತಮ್ಮ ಲಾಭಕ್ಕೆ ಈ ಶಾಂತಿ ಪ್ರಿಯತೆಯನ್ನು ಬಳಸಿಕೊಳ್ಳುತ್ತಿದೆ. ಇನ್ನು ಸುಮ್ಮನೆ ಕೂರುವ ಕಾಲ ಇಲ್ಲ. ಒಗ್ಗಟ್ಟಿನಿಂದ ಎದ್ದು ನಿಲ್ಲಬೇಕಿದೆ. ಇದು ಸಣ್ಣ ದುರಂತ ಅಲ್ಲವೇ ಅಲ್ಲ, ಇದೊಂದು ದೊಡ್ಡ ದುರಂತ. ಜಾತಿ, ಧರ್ಮ, ಪಕ್ಷ ಬಿಟ್ಟು ಒಗ್ಗಟ್ಟಿನಿಂದ ಖಂಡಿಸಬೇಕು ಎಂದು ಕರೆ ನೀಡಿದರು.

ಶ್ರೀ ಕೋದಂಡ ರಾಮೋತ್ಸವ ಸಮಿತಿ, ನ್ಯಾಷನಲ್ ಮೆಡಿಕೋಸ್ ಅಸೋಸಿಯೇಷನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ‘ನೀಮಾ’ ಸೇರಿದಂತೆ ಹಲವು ಸಂಘಟನೆ ಸದಸ್ಯರು, ಮುಖಂಡರು ಭಾಗವಹಿಸಿದ್ದರು.

ಕೋದಂಡ ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶ್ಯಾಂ ಅಪ್ಪಣ್ಣ, ‘ನೀಮಾ’ ಅಧ್ಯಕ್ಷ ಡಾ.ರಾಜಾರಾಂ, ಪ್ರಮುಖರಾದ ಜಯಂತಿ ಶೆಟ್ಟಿ, ಉಣ್ಣಿಕೃಷ್ಣ, ಸುಧೀರ್, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.