ಸೋಮವಾರಪೇಟೆ, ಏ. ೩೦: ಪಟ್ಟಣದ ಬಸವ ಬಳಗ, ತಾಲೂಕು ಆಡಳಿತ, ಹಿರಿಯ ನಾಗರಿಕರ ಟ್ರಸ್ಟ್, ಸಾಹಿತ್ಯ ಪರಿಷತ್ತು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಜಗಜ್ಯೋತಿ ಬಸವೇಶ್ವರರ ೮೯೨ನೇ ಜಯಂತಿ ಕಾರ್ಯಕ್ರಮ ಪಟ್ಟಣದ ಬಸವೇಶ್ವರ ಪ್ರತಿಮೆ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಬಸವಣ್ಣನವರ ತತ್ವ, ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ದಾರ್ಶನಿಕರ ಆಶಯದಂತೆ ಜಾತ್ಯಾತೀತ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಇರುವ ಏಕೈಕ ಬಸವೇಶ್ವರರ ಪ್ರತಿಮೆ ಇದ್ದಾಗಿದ್ದು, ಈ ವೃತ್ತಕ್ಕೆ ಅಧಿಕೃತವಾಗಿ ಬಸವೇಶ್ವರ ವೃತ್ತವೆಂದು ನಾಮಕರಣ ಮಾಡಬೇಕೆಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಸೋಮವಾರಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಮ್ ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮಂತರ್ ಗೌಡ, ಸಂಬAಧಿಸಿದ ಪಂಚಾಯ್ತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಜಾರಿಗೊಳಿಸುವಂತೆ ತಿಳಿಸಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಬಸವಣ್ಣ ನವರು ಲಿಂಗ ತಾರತಮ್ಯ, ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದವರು. ಆ ಮೂಲಕ ಸಮಾನತೆ ತರಲು ಪ್ರಯತ್ನಿಸಿದರು. ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿ ಜನಸಾಮಾನ್ಯರಿಗೆ ಪರಿಸ್ಥಿತಿಯನ್ನು ಅರ್ಥೈಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು ಎಂದು ಸ್ಮರಿಸಿದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ, ಚಿತ್ರದುರ್ಗ ಬೃಹನ್ಮಠದ ಸಹಕಾರದೊಂದಿಗೆ ಸೋಮವಾರಪೇಟೆ ಪತ್ರಕರ್ತರ ಸಂಘದ ಮೂಲಕ ನಿರ್ಮಾಣಗೊಂಡ ಬಸವೇಶ್ವರರ ಪ್ರತಿಮೆ ೨೫ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ ಎಂದರು.
ಕಳೆದ ೨೪ವರ್ಷಗಳಿಂದ ಪ್ರತಿಮೆಯ ಮುಂದೆಯೇ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಾತ್ಯಾತೀತವಾಗಿ ಬಸವಜಯಂತಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಹಾಲೆಬೇಲೂರು ನಿರ್ವಾಣಿ ಶೆಟ್ಟಿ, ಜನರಲ್ ಕಾರ್ಯಪ್ಪ ಪ್ರಶಸ್ತಿ ಪುರಸ್ಕೃತ ಪೊಲೀಸ್ ಪೇದೆ ಸುದೀಶ್, ಪಟ್ಟಣ ಪಂಚಾಯ್ತಿ ಪೌರಸೇವಾ ನೌಕರರಾದ ಹೊನಲಾದೇವಿ, ಕಂದಾಯ ಇಲಾಖೆ ನಿವೃತ್ತ ಡಿ ಗ್ರೂಪ್ ನೌಕರ ಕೃಷ್ಣ ಅವರುಗಳನ್ನು ಸನ್ಮಾನಿಸಲಾಯಿತು.
ಕುಶಾಲನಗರದ ಶಶಿಕುಮಾರ್ ಹಾಗೂ ಮಂಜು ಭಾರ್ಗವಿ ದಂಪತಿ ಪುತ್ರಿ ಷಷ್ಠಿ ಷಾಡ್ಗುಣ್ಯಳಿಂದ ಮೂಡಿಬಂದ ವಚನ ಕಂಠಪಾಠ ಪ್ರಸ್ತುತಿ ಮೆಚ್ಚುಗೆಗೆ ಪಾತ್ರವಾಯಿತು.
ಕೊಡ್ಲಿಪೇಟೆ ಕಲ್ಲು ಮಠದ ಶ್ರೀ ಮಹಾಂತ ಸ್ವಾಮೀಜಿ, ಶನಿವಾರಸಂತೆ ಸಮೀಪದ ಮಾದ್ರೆ ಮುದ್ದಿನ ಕಟ್ಟೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಅವರುಗಳು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರಾದ ಶೀಲಾ ಡಿಸೋಜಾ, ಸಂಜೀವ, ತಹಶೀಲ್ದಾರ್ ಕೃಷ್ಣಮೂರ್ತಿ, ಪ.ಪಂ. ಮುಖ್ಯಾಧಿಕಾರಿ ಸತೀಶ್, ಹಿರಿಯ ನಾಗರಿಕರ ಟ್ರಸ್ಟ್ನ ಅಧ್ಯಕ್ಷ ಕೆ. ಜಿ. ಸುರೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಜೇತ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಪ್ಪ, ಕೆ.ಟಿ.ಡಿ.ಒ. ತಾಲೂಕು ಅಧ್ಯಕ್ಷ ವಸಂತ, ಮೋಟಾರು ವಾಹನ ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ಸೂಡ ಸದಸ್ಯ ಬಸವರಾಜ್, ಜನಪದ ಪರಿಷತ್ತು ಅಧ್ಯಕ್ಷ ಪ್ರಕಾಶ್, ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್, ತಾಲೂಕು ಅಧ್ಯಕ್ಷ ಆದರ್ಶ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಗಿರೀಶ್, ಅಕ್ಕನ ಬಳಗದ ಕಾರ್ಯದರ್ಶಿ ಮಾಯಾ ಗಿರೀಶ್ ಸೇರಿದಂತೆ ಇತರರು ಇದ್ದರು.