ಸೋಮವಾರಪೇಟೆ, ಏ. ೨೯: ‘ನಾವು ಪ್ರತಿಷ್ಠಾನ ಸಂಸ್ಥೆ’ಯ ವತಿಯಿಂದ ಮಹಿಳಾ ಸಮಾಜದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿರುವ ಶಿಬಿರಾರ್ಥಿಗಳು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರ ಮನೆಗೆ ಭೇಟಿ ನೀಡಿ, ಸಮಾಜಸೇವೆಯ ಬಗ್ಗೆ ಸಂವಾದ ನಡೆಸಿದರು.

ರವೀಂದ್ರ ಅವರು ಬೆಳೆದು ಬಂದ ಹಾದಿ, ಸಮಾಜಸೇವೆಯ ಉದ್ದೇಶ, ಅದರಿಂದ ಸಿಗುವ ತೃಪ್ತಿಯ ಬಗ್ಗೆ ಮಕ್ಕಳು ಪ್ರಶ್ನೆಗಳನ್ನು ಕೇಳಿದರು. ಈ ಸಂದರ್ಭ ಮಾತನಾಡಿದ ರವೀಂದ್ರ ಅವರು, ತಮ್ಮ ವಿದ್ಯಾರ್ಥಿ ಜೀವನ, ಉದ್ಯೋಗ, ಸಮಾಜ ಸೇವೆಯಲ್ಲಿ ಸಿಗುವ ತೃಪ್ತಿಯ ಬಗ್ಗೆ ಮಕ್ಕಳೊಂದಿಗೆ ಮನಬಿಚ್ಚಿ ಮಾತನಾಡಿದರು.

ಸಾಧನೆಯ ಹಿಂದೆ ತ್ಯಾಗಗಳನ್ನು ಮಾಡಬೇಕಾದ ಅನಿವಾರ್ಯತೆಯೂ ಇದೆ. ತಾನು ದುಡಿದ ಸ್ವಲ್ಪ ಭಾಗವನ್ನು ಸಮಾಜಕ್ಕೆ ನೀಡುತ್ತಿದ್ದೇನೆ. ಪ್ರತಿವರ್ಷ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ನೋಟ್‌ಪುಸ್ತಕಗಳನ್ನು ವಿತರಿಸುತ್ತಿದ್ದು, ಅನೇಕ ಜನಕಲ್ಯಾಣ ಕಾರ್ಯಕ್ಕೆ ಕೈಲಾದ ಸಹಾಯ ಮಾಡಿದ್ದೇನೆ ಎಂದು ಹೇಳಿದರು.

ವಿದ್ಯಾರ್ಥಿಗಳು ಶಿಸ್ತು, ನಿರಂತರ ಕಲಿಕೆ, ಛಲ, ಗುರಿಯೊಂದಿಗೆ ಮುನ್ನಡೆದರೆ ಪ್ರತಿಯೊಬ್ಬರೂ ಸಾಧನೆ ಮಾಡಬಹುದು. ಮಕ್ಕಳು ಮೂಬೈಲ್, ಸಾಮಾಜಿಕ ಜಾಲತಾಣಗಳ ದಾಸರಾದರೆ, ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದ ಅವರು, ಕಲಿಕೆಗೆೆ ಮಾತ್ರ ಮೊಬೈಲ್‌ಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಭ್ರಷ್ಟರಿಂದ ದೂರವಿರಬೇಕು. ಸವಾಲುಗಳನ್ನು ಎದುರಿಸಿ ಗೆಲ್ಲುವ ಛಲ ಇರಬೇಕು. ಯಶಸ್ಸು ಸಿಗುವವರೆಗೆ ಕಷ್ಟಪಡಬೇಕು. ಯಶಸ್ಸು ಗಳಿಸಿದ ನಂತರ ನಿಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಆರ್ಥಿಕ ಸಬಲತೆಯ ನಂತರ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಸಮಾಜಸೇವೆಯನ್ನು ಮುಂದುವರಿಸ ಬೇಕು ಎಂದು ಹೇಳಿದರು.

ಹಾಸನ ಮಾಸ್ಟರ್ ಬ್ರೆöÊನ್ ಸೆಂಟರ್‌ನ ರಾಧ ಅವರು ಕೈಬರಹ ಸುಧಾರಣೆ ಬಗ್ಗೆ ತಿಳಿಸಿಕೊಟ್ಟರು. ಪ್ರತಿಷ್ಠಾನದ ಸಂಸ್ಥಾಪಕರಾದ ಗೌತಮ್ ಕಿರಗಂದೂರು, ಸುಮನಾ ಮ್ಯಾಥ್ಯು ಇದ್ದರು.