ಮಡಿಕೇರಿ, ಏ. ೨೯: ಶಿಕ್ಷಣ, ಸಾಮಾಜಿಕ, ಉದ್ಯೋಗ, ರಾಜಕೀಯ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿ ಹೊಂದುವ ಸಲುವಾಗಿ ತಮಿಳುನಾಡು ರಾಜ್ಯದಲ್ಲಿ ಇರುವಂತೆ ಕರ್ನಾಟಕ ರಾಜ್ಯದಲ್ಲಿಯೂ ಅರುಂದತಿಯಾರ್ ಪೌರ ಕಾರ್ಮಿಕ ಸಫಾಯಿ ಕರ್ಮಚಾರಿಗಳಿಗೆ ಶೇ.೩ರಷ್ಟು ಒಳ ಮೀಸಲಾತಿ ನೀಡುವಂತೆ ರಾಜ್ಯ ಸರಕಾರ ಆದೇಶ ಮಾಡಬೇಕೆಂದು ಅಖಿಲ ಕರ್ನಾಟಕ ಅರುಂದತಿಯಾರ್ ಮಹಾಸಭಾ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಪ್ರಮುಖರು ರಾಜ್ಯದಲ್ಲಿ ಸುಮಾರು ೩೦ ಲಕ್ಷದಷ್ಟಿರುವ ಅರುಂದತಿಯಾರ್ ಜಾತಿಗೆ ಸೇರಿದ ಸಫಾಯಿ ಕರ್ಮಚಾರಿಗಳಿಗೆ ಸರಕಾರದ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ. ಇತರ ಜಾತಿಯವರು ಸವಲತ್ತುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಹಾಸಭಾದ ವತಿಯಿಂದ ಕಳೆದ ೨೬ ವರ್ಷಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬರಲಾಗುತ್ತಿದೆ. ಇದೀಗ ಜಾತಿಗಣತಿ ಪ್ರಕ್ರಿಯೆ ಕೂಡ ನಡೆಯುತ್ತಿದ್ದು, ಅರುಂದತಿಯಾರ್ ಸಮುದಾಯದವರು ಜಾತಿ ಕಲಂನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಸರಕಾರಿ ಅಧಿಕಾರಿಗಳು ಕೂಡ ಕಾರ್ಮಿಕರಿಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.
ಅರುಂದತಿಯಾರ್ ಕರ್ಮ ಚಾರಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪನೆ ಮಾಡಲು ಕೇಂದ್ರ ಸ್ಥಾನ ಬೆಂಗಳೂರಿನ ೨೫ ಎಕರೆ ಸರಕಾರಿ ಭೂಮಿಯನ್ನು ಮಂಜೂರು ಮಾಡಬೇಕು. ಸರಕಾರದ ಮೂಲಕ ಪೌರ ಕಾರ್ಮಿಕರ ದಿನ ಆಚರಿಸುವ ಸಂದರ್ಭ ಸ್ವಾತಂತ್ರö್ಯ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಮುದಾಯದ ಮಹನೀಯರನ್ನು ಸ್ಮರಣೆ ಮಾಡಬೇಕು. ಸಮುದಾಯದ ಮಕ್ಕಳಿಗೆ ವಿದ್ಯಾರ್ಹತೆಗೆ ತÀಕ್ಕುದಾದ ಸರಕಾರಿ ಹುದ್ದೆ ನೀಡಬೇಕು. ಎರಡು ಸೇರಿದಂತೆ ಒಟ್ಟು ೧೩ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸರಕಾರಿ ಹಾಗೂ ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಮಂಡ್ಯದ ಆರ್. ಕೃಷ್ಣ, ಪದಾಧಿಕಾರಿಗಳಾದ ಹೆಚ್.ಆರ್. ಮಂಜುನಾಥ್, ವೆಂಕಟೇಶ್, ಪೆರಮಾಳ್, ಮಹದೇವಯ್ಯ ಇದ್ದರು.