ಸಿದ್ದಾಪುರ, ಏ. ೨೯: ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಅಮ್ಮತ್ತಿಯ ನಾಡು ಕಚೇರಿ ಎದುರು ನಿವೇಶನ ರಹಿತರ ಹೋರಾಟ ಸಮಿತಿಯಿಂದ ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಕಾರರು ತಮಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳ ಬಳಿ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಅಧ್ಯಕ್ಷ ಮೋಣಪ್ಪ, ಪಾಪಣ್ಣ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.

ತಹಶೀಲ್ದಾರ್ ಭೇಟಿ

ಪ್ರತಿಭಟನೆ ಸ್ಥಳಕ್ಕೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅನಂತ್ ಶಂಕರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರತಿಭಟನೆಕಾರರು ಮಾತನಾಡಿ ಈ ಭಾಗದಲ್ಲಿ ಕಳೆದ ಸುಮಾರು ವರ್ಷಗಳಿಂದ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಮತ್ತು ಬಾಡಿಗೆ ಮನೆಗಳಲ್ಲಿ ವಾಸ ಮಾಡಿಕೊಂಡಿದ್ದೇವೆ. ತಮಗೆ ಶಾಶ್ವತ ಸೂರು ಕಲ್ಪಿಸಲು ಜಾಗ ನೀಡಬೇಕೆಂದು ಒತ್ತಾಯಿಸಿದರು.