ಸೋಮವಾರಪೇಟೆ, ಏ. ೨೮: ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿ ಉತ್ಸವಗಳು ಸಂಭ್ರಮ ಸಡಗರದಿಂದ ಜರುಗುತ್ತಿದ್ದು, ಪಟ್ಟಣ ಸಮೀಪದ ಹಾನಗಲ್ಲು ಶೆಟ್ಟಳ್ಳಿಯಲ್ಲಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನೆರವೇರಿತು.
ಗ್ರಾಮದ ನಡುಭಾಗದಲ್ಲಿ ೭ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದೆ ಎಂಬ ಪ್ರತೀತಿ ಇರುವ ಸುಗ್ಗಿ ಕಟ್ಟೆಯ ಜೋಡಿ ಕಂಬತಳೆಯಲ್ಲಿ ಶ್ರೀ ಸಬ್ಬಮ್ಮ ದೇವರಿಗೆ ವಿಶೇಷ ಪೂಜೆಗಳು ನೆರವೇರಿದವು.
ಸುಗ್ಗಿ ಸಂದರ್ಭದ ೧೨ ದಿನಗಳ ಕಾಲ ಗ್ರಾಮಸ್ಥರು ಕಟ್ಟುನಿಟ್ಟಿನ ಆಚರಣೆಯಲ್ಲಿ ತೊಡಗಿದ್ದರು. ಮಲ್ಲು ಸುಗ್ಗಿಯಲ್ಲಿ ಹಾನಗಲ್ಲು ಶೆಟ್ಟಳ್ಳಿ ಮಾತ್ರವಲ್ಲದೇ ಸುತ್ತಮುತ್ತಲ ಊರಿನಿಂದ ಸಾರ್ವಜನಿಕ ಭಕ್ತಾದಿಗಳು, ಬಂಧುಗಳು ಆಗಮಿಸಿ ಗ್ರಾಮ ದೇವಿಗೆ ಪೂಜೆ ಸಲ್ಲಿಸಿದರು.
ತಾ. ೨೯ರಂದು (ಇಂದು) ಮಾರಿ ಕಳುಹಿಸುವ ಸಾಂಪ್ರದಾಯಿಕ ಪೂಜೆಯ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ತೆರೆಬೀಳಲಿದೆ. ಸುಗ್ಗಿ ಅಂಗವಾಗಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ಊಲು ತೂಗುವದು, ದೇವರ ಮೂರ್ತಿಯ ಮೆರವಣಿಗೆ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ತೆಂಗಿನ ಕಾಯಿ ಕೀಳುವುದು, ಸುಗ್ಗಿ ಕುಣಿತ ಸೇರಿದಂತೆ ಇತರ ಸಾಂಪ್ರದಾಯಿಕ ಆಚರಣೆಗಳು ನೆರವೇರಿದವು.
ಆಚರಣೆ ಮುಂದುವರೆಸುವುದು ಕರ್ತವ್ಯ: ಪೂರ್ವಿಕರು ನೆಲಜಲ, ಪರಿಸರ ಸಂರಕ್ಷಣೆಯೊAದಿಗೆ ಭವ್ಯ ಸಂಸ್ಕೃತಿ, ಪದ್ದತಿ, ಪರಂಪರೆಯನ್ನು ಉಳಿಸಿಕೊಟ್ಟಿದ್ದಾರೆ. ಇವುಗಳನ್ನು ಉಳಿಸಿ-ಬೆಳೆಸಿ ಮುಂದಿನ ತಲೆಮಾರಿಗೂ ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಿಸಿದರು.
ಸುಗ್ಗಿ ಕಟ್ಟೆಗೆ ಆಗಮಿಸಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪದ್ಧತಿ, ಪರಂಪರೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಯುವ ಜನಾಂಗಕ್ಕೆ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಸುಗ್ಗಿಕಟ್ಟೆ ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಸರ್ವ ರೀತಿಯಲ್ಲೂ ಸಹಕಾರ ನೀಡಲಾಗುವುದು ಎಂದರು.
ಹಿAದಿನಿAದಲೂ ಸಾಂಪ್ರದಾಯಿಕ ಆಚರಣೆಗಳನ್ನು ಚಾಚೂತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ೧೨ ದಿನಗಳ ಹಿಂದೆ ಬೀರೇದೇವರಿಗೆ ವೀಳ್ಯ ಚೆಲ್ಲುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಿದ್ದು, ಊಲು ಏರಿಸುವುದು, ಶುಕ್ರವಾರ ದೇವರಿಗೆ ಎಡೆ ಸಮರ್ಪಣೆ, ಶನಿವಾರ ಹಗಲು ಸುಗ್ಗಿ, ಭಾನುವಾರ ಹೆದ್ದೇವರ ಬನದಲ್ಲಿ ಪೂಜೆ, ಸೋಮವಾರ ಮಲ್ಲುಸುಗ್ಗಿಯನ್ನು ಸಂಭ್ರಮದಿAದ ನಡೆಸಲಾಗಿದೆ ಎಂದು ಗ್ರಾಮ ಸಮಿತಿ ಅಧ್ಯಕ್ಷ ಎಲ್.ಬಿ. ಉಲ್ಲಾಸ್ ತಿಳಿಸಿದರು.
ಗ್ರಾಮದ ಜನ ಜಾನುವಾರುಗಳ ಸುಭೀಕ್ಷೆಗಾಗಿ ಗ್ರಾಮ ದೇವತೆ ಸಬ್ಬಮ್ಮ ದೇವಿಯನ್ನು ಸಾಮೂಹಿಕವಾಗಿ ಪ್ರಾರ್ಥಿಸುವ ಪದ್ದತಿ ಹಿಂದಿನಿAದಲೂ ಬೆಳೆದುಬಂದಿದ್ದು, ಇಂದಿಗೂ ಅದನ್ನು ಮುಂದುವರೆಸಿಕೊAಡು ಹೋಗಲಾಗುತ್ತಿದೆ ಎಂದು ಉಲ್ಲಾಸ್ ಹೇಳಿದರು.
ಅನಾದಿ ಕಾಲದಿಂದಲೂ ಗ್ರಾಮದಲ್ಲಿ ಸುಗ್ಗಿ ಹಬ್ಬ ನಡೆಸಿಕೊಂಡು ಬರಲಾಗುತ್ತಿದ್ದು, ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿಯೂ ಸುಗ್ಗಿ ಉತ್ಸವ ಮನ್ನಣೆ ಪಡೆದಿದೆ. ಯುವ ಜನಾಂಗದಲ್ಲೂ ಸುಗ್ಗಿಯ ಮಹತ್ವ ತಿಳಿಸುವ ಕಾರ್ಯಗಳು ನಡೆಯುತ್ತಿವೆ ಎಂದು ಗ್ರಾಮ ಸಮಿತಿ ಉಪಾಧ್ಯಕ್ಷ ಡಿ.ಟಿ. ಆನಂದ ಹೇಳಿದರು.
ಸಮಿತಿಯ ಕಾರ್ಯದರ್ಶಿ ಕವನ್, ಖಜಾಂಚಿ ಎಂ.ಟಿ. ಉಮೇಶ್, ಪದಾಧಿಕಾರಿಗಳಾದ ಗಿರೀಶ್, ಎ.ಜೆ. ಸುರೇಶ್, ಅಭಿಲಾಷ್, ಪ್ರಧಾನ್, ಶೋಭರಾಜ್, ಪ್ರಸನ್ನ, ದಿನೇಶ್ ಸೇರಿದಂತೆ ಗ್ರಾಮದ ಮುಖ್ಯಸ್ಥರು, ಗ್ರಾಮಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು. ದೇವರ ಒಡೆಕಾರರಾಗಿ ಜಯೇಂದ್ರ, ಬಸವರಾಜು, ಪ್ರಸನ್ನ, ರಘು, ಲೋಕೇಶ್ ಸೇವೆ ಮಾಡಿದರು. ಡಿಂಪಲ್, ಕೃಪೇಶ್, ನಿಖಿಲ್, ಹೇಮಂತ್, ಹಿತೇಶ್ ಅವರುಗಳು ಪೂಜಾ ಕಾರ್ಯದಲ್ಲಿದ್ದರು. ತಾ. ೨೯ರಂದು (ಇಂದು) ಮಾರಿ ಕಳುಹಿಸುವ ಪೂಜೆಯೊಂದಿಗೆ ಪ್ರಸಕ್ತ ಸಾಲಿನ ಸುಗ್ಗಿ ಕಟ್ಟುಪಾಡುಗಳು ಮುಕ್ತಾಯವಾಗಲಿದೆ.