ಸೋಮವಾರಪೇಟೆ,ಏ.೨೮: ಪ್ರವಾಸಿಗರು ಮಾತ್ರವಲ್ಲದೇ ದಾರಿಹೋಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಬೇಳೂರು ಬಾಣೆಯ ಕೆಲ ಪ್ರದೇಶಕ್ಕೆ ಬೇಳೂರು ಕ್ಲಬ್ನಿಂದ ಫೆನ್ಸಿಂಗ್ ಅಳವಡಿಸುವ ಕಾರ್ಯ ನಡೆಯುತ್ತಿರುವ ಬೆನ್ನಲ್ಲೇ, ಪ್ರವಾಸೋದ್ಯಮ ಮತ್ತು ಕಂದಾಯ ಇಲಾಖೆಯನ್ನು ಒಳಗೊಂಡ ಅಧಿಕಾರಿಗಳ ತಂಡದಿAದ ಜಂಟಿ ಸರ್ವೆ ನಡೆಸಲಾಯಿತು.
ಹಚ್ಚಹಸಿರಿನ ಮೈದಾನವಾಗಿರುವ ಬೇಳೂರು ಬಾಣೆಯು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಇಲ್ಲಿ ದಿನಂಪ್ರತಿ ನೂರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದು, ಜಾನುವಾರುಗಳಿಗೂ ಮೇವು ಒದಗಿಸುವ ಸ್ಥಳವಾಗಿದೆ. ಈ ಮಧ್ಯೆ ಕೆಲ ಪುಂಡರು ಮದ್ಯ ಸೇವಿಸಿ ಬಾಟಲಿಗಳನ್ನು ಎಸೆಯುವುದು, ಪ್ಲಾಸ್ಟಿಕ್ ತ್ಯಾಜ್ಯ ಸುರಿಯುವುದರ ಮೂಲಕ ಮೈದಾನದ ಅಂದಕ್ಕೆ ಧಕ್ಕೆ ತರುವ ಕೆಲಸವನ್ನೂ ಮಾಡುತ್ತಿದ್ದಾರೆ.
ಇದೇ ಮೈದಾನದಲ್ಲಿ ಬೇಳೂರು ಕ್ಲಬ್ನಿಂದ ಗಾಲ್ಫ್ ಅಭ್ಯಾಸ ಮತ್ತು ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿದ್ದು, ಒಡೆದ ಗಾಜುಗಳಿಂದ ಮುಕ್ತಿ, ಮೈದಾನದ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲು ಬಾಣೆಯ ಸುತ್ತಲೂ ಫೆನ್ಸಿಂಗ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಬೇಳೂರು ಕ್ಲಬ್ನಿಂದ ದಿಢೀರ್ ಎದುರಾದ ಇಂತಹ ಕ್ರಮಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಇಡೀ ಜಾಗಕ್ಕೆ ಫೆನ್ಸಿಂಗ್ ಹಾಕುವ ಮೂಲಕ ಪೈಸಾರಿ ಜಾಗ, ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟ ಜಾಗ ಸೇರಿದಂತೆ ಊರುಡುವೆ ಜಾಗವನ್ನೂ ವಶಪಡಿಸಿಕೊಳ್ಳಲು ಕ್ಲಬ್ ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಗೊಂಡಿದೆ. ಈಗಾಗಲೇ ಕ್ಲಬ್ನಿಂದ ಕೆಲವೆಡೆಗಳಲ್ಲಿ ಫೆನ್ಸಿಂಗ್ ಅಳವಡಿಸಲಾಗಿದೆ. ಬಾಣೆಯ ಕೆಲ ಪ್ರದೇಶ ಬೇಳೂರು ಕ್ಲಬ್ಗೆ ಸೇರಿದ್ದರೆ, ಉಳಿದ ಬಾಣೆ ಜಾಗ ಕಂದಾಯ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿದೆ ಎನ್ನಲಾಗಿದೆ.
ಈ ಮಧ್ಯೆ ಉಳಿದ ಭಾಗದಲ್ಲೂ ಬೇಲಿ ಹಾಕುವ ಪ್ರಯತ್ನ ಮುಂದುವರೆಯದAತೆ ಸ್ಥಳೀಯ ನಿವಾಸಿಯಾಗಿರುವ ವಕೀಲ ಕಾಟ್ನಮನೆ ವಿಠಲ್ ಗೌಡ ಅವರು ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿ, ಬೇಳೂರು ಬಾಣೆಯಲ್ಲಿರುವ ಸರ್ಕಾರಿ ಪೈಸಾರಿ ಜಾಗವನ್ನು ಯಾರೂ ಕೂಡ ಒತ್ತುವರಿ ಮಾಡದಂತೆ ಕ್ರಮಕ್ಕೆ ಸೂಚಿಸುವಂತೆ ಮನವಿ ಮಾಡಿದ್ದಾರೆ.
ಇದು ಒಂದೆಡೆಯಾದರೆ ಮತ್ತೊಂದೆಡೆ ಬೇಳೂರು ಕ್ಲಬ್ನ ಪ್ರಮುಖರು ಹಾಗೂ ಸ್ಥಳೀಯ ನಿವಾಸಿಗಳ ಉಪಸ್ಥಿತಿಯಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡAತೆ ಜಂಟಿ ಸರ್ವೆ ಕಾರ್ಯವೂ ನಡೆದಿದೆ.
ಕಳೆದ ೨೦೧೬ರಲ್ಲಿ ಕುಸುಬೂರು ಗ್ರಾಮದ ಸರ್ವೆ ನಂಬರ್ ೧೪೩/೨ರ ಬೇಳೂರು ಬಾಣೆಯಲ್ಲಿರುವ ಪೈಸಾರಿ ಜಾಗದ ಪೈಕಿ ೭.೧೨ ಏಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಅಂದಿನ ಜಿಲ್ಲಾಧಿಕಾರಿಗಳು ಮೀಸಲಿಟ್ಟು ಆದೇಶ ಮಾಡಿದ್ದು, ಈ ಜಾಗದ ಗಡಿ ಗುರುತಿಸುವ ಸರ್ವೆ ಕಾರ್ಯ ಇಂದು ನಡೆದಿದೆ.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು, ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಸೇರಿದಂತೆ ಬೇಳೂರು ಕ್ಲಬ್ನ ಪದಾಧಿಕಾರಿಗಳ ಸಮಕ್ಷಮ ಪ್ರವಾಸೋದ್ಯಮ ಇಲಾಖೆಗೆ ಮೀಸಲಿಟ್ಟ ೭.೧೨ ಏಕರೆ ಜಾಗವನ್ನು ಸರ್ವೆ ಮೂಲಕ ಗಡಿ ಗುರುತು ಮಾಡಲಾಗಿದೆ.
ಬೇಳೂರು ಬಾಣೆಯ ನಡುಭಾಗದಲ್ಲಿ ಸರ್ವೆ ಕಾರ್ಯ ನಡೆದಿದ್ದು, ಬೇಳೂರು ಕ್ಲಬ್ನಿಂದ ಅಳವಡಿಸಿರುವ ಫೆನ್ಸಿಂಗ್ನ ಒಳಗೆ ಈ ಜಾಗ ಬರುತ್ತದೆಯೇ ಇಲ್ಲವೇ ಎಂಬುದು ಇನ್ನಷ್ಟೇ ಅಧಿಕೃತವಾಗಿ ತಿಳಿದುಬರಬೇಕಿದೆ. ಸರ್ವೆ ಸಂದರ್ಭ ಕ್ಲಬ್ನ ಕಾರ್ಯದರ್ಶಿ ಪವನ್, ಶಮಂತ್, ಸ್ಥಳೀಯರಾದ ಕಾಟ್ನಮನೆ ವಿಠಲ್ ಗೌಡ, ಕೆ.ಬಿ. ಜಗದೀಶ್, ವಸಂತ್, ಸುಬ್ಬಯ್ಯ, ಮಹೇಶ್ ಸೇರಿದಂತೆ ಇತರರು ಇದ್ದರು.