ಗೋಣಿಕೊಪ್ಪಲು, ಏ.೨೭: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯ ಅಂಗವಾಗಿ ಕ್ರೀಡಾಪಟುಗಳಿಗೆ ರಸ್ತೆ ರಿಲೇ ನಡೆಯಿತು.

ಮುಂಜಾನೆ ೬.೩೦ ಗಂಟೆಗೆ ಪೊನ್ನಂಪೇಟೆಯ ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡ ೪೧ ಕೊಡವ ಕುಟುಂಬಗಳ ಕ್ರೀಡಾಪಟುಗಳು ರಸ್ತೆ ರಿಲೇಯಲ್ಲಿ ಭಾಗವಹಿಸಿದ್ದರು. ಯುವಕ, ಯುವತಿ, ಪುರುಷ ಹಾಗೂ ಮಹಿಳೆಯರು ಭಾಗವಹಿಸಿ ಗಮನ ಸೆಳೆದರು. ಚೆಕ್ಕೇರ ಕ್ರಿಕೆಟ್ ನಮ್ಮೆಯ ಅಧ್ಯಕ್ಷರಾದ ಚೆಕ್ಕೇರ ಚಂದ್ರಪ್ರಕಾಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.

ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಆರಂಭಗೊAಡ ರಸ್ತೆ ರಿಲೇ ಓಟ ಹುದಿಕೇರಿಯ ಚೆಕ್ಕೇರ ಕ್ರಿಕೆಟ್ ಕಪ್ ಮೈದಾನದಲ್ಲಿ ಮುಕ್ತಾಯವಾಯಿತು.

೮ ಕೀ.ಮೀ.ರಸ್ತೆ ರಿಲೇಯಲ್ಲಿ ಚೊಟ್ಟೆಯಂಡಮಾಡ ಕುಟುಂಬ (ಪ್ರಥಮ) ಮಚ್ಚಮಾಡ (ದ್ವಿತೀಯ) ಚೆಕ್ಕೇರ (ತೃತೀಯ) ಕಿಮ್ಮುಡಿರ (ನಾಲ್ಕನೇ) ದೇಯಂಡ (ಐದನೇ) ಹಾಗೂ ಪಾರುವಂಗಡ (ಆರನೇ) ಸ್ಥಾನ ಪಡೆಯಿತು.

ಬಹುಮಾನ ಪ್ರಾಯೋಜಕತ್ವ ವಹಿಸಿದ್ದ ಹುದಿಕೇರಿ ಗ್ರಾ.ಪಂ.ಅಧ್ಯಕ್ಷರಾದ ಕುಪ್ಪಣಮಾಡ ನಿವ್ಯ ಕಾವೇರಮ್ಮ ರೂ. ೬೦ ಸಾವಿರ ನಗದು ಬಹುಮಾನ ಸೇರಿದಂತೆ ಪಾರಿತೋಷಕ ವಿತರಿಸಿದರು.

ಸಭಾ ಕಾರ್ಯಕ್ರಮ ಉದ್ದೇಶಿಸಿ ವೈದ್ಯರಾದ ಡಾ. ಮುಕ್ಕಾಟಿರ ಅಮೃತ್ ನಾಣಯ್ಯ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯ ವೃದ್ಧಿಯಾಗಲಿದೆ. ಯಾವುದೇ ಕ್ರೀಡೆಯಾದರೂ ಭಾಗವಹಿಸುವಿಕೆ ಮುಖ್ಯ ಉತ್ತಮ ಕ್ರೀಡೆಗಳು ಹೆಚ್ಚಾಗಿ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಪ್ರತಿ ನಾಗರಿಕರಿಗೂ ಅವಕಾಶ ಲಭಿಸುವಂತಾಗಬೇಕು ಎಂದರು. ವೀರಾಜಪೇಟೆ ತಾಲೂಕು ಎಡಿಎಲ್‌ಆರ್ ಬಾನಂಗಡ ಅರುಣ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡೆ ನಡೆಸುವ ಮೂಲಕ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವ ಪ್ರಯತ್ನ ನಡೆದಿದೆ ಎಂದರು.

ಪ್ರಾಸ್ತಾವಿಕವಾಗಿ ಚೆಕ್ಕೇರ ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಚಂದ್ರ ಪ್ರಕಾಶ್ ಮಾತನಾಡಿ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ರಿಲೇ ಓಟ ಆಯೋಜನೆ ಮಾಡಲಾಗಿದೆ ಎಂದರು. ವೇದಿಕೆಯಲ್ಲಿ ಕುಪ್ಪಣಮಾಡ ಕುಶ, ಡಾ. ಸೌಮ್ಯ ನಾಣಯ್ಯ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯ ಕಾರ್ಯದರ್ಶಿ ಚೆಕ್ಕೇರ ಆದರ್ಶ್ ಸ್ವಾಗತಿಸಿ, ವಂದಿಸಿದರು.

ತಿದ್ದುಪಡಿ : ೨೦ ನೇ ದಿನದ ಚೆಕ್ಕೇರ ಕ್ರಿಕೆಟ್ ನಮ್ಮೆಯಲ್ಲಿ ಚೀಯಣಮಾಡ ವಿರುದ್ದ ಚಿಮ್ಮಣಮಾಡ ತಂಡ ೩೩ ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

-ಹೆಚ್. ಕೆ. ಜಗದೀಶ್