ಪೊನ್ನಂಪೇಟೆ, ಏ. ೨೩: ಧಾರವಾಡದ ಚೇತನ ಫೌಂಡೇಶನ್ ಕರ್ನಾಟಕ ಇವರ ವತಿಯಿಂದ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ತೇಜನಕ್ಕಾಗಿ ಶ್ರಮಿಸಿದವರಿಗೆ ನೀಡಲಾಗುವ ‘ಶ್ರೀ ಕೃಷ್ಣರಾಜ ಒಡೆಯರ್ ಸದ್ಭಾವನಾ' ರಾಜ್ಯಮಟ್ಟದ ಸಮಾಜ ಸೇವಾ ಪ್ರಶಸ್ತಿ ಪುರಸ್ಕöÈತರಾದ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಕೆದಮುಳ್ಳೂರು ಗ್ರಾ.ಪಂ. ಸದಸ್ಯರಾದ ಮೀತಲತಂಡ ಎಂ. ಇಸ್ಮಾಯಿಲ್ ಅವರನ್ನು ಕೆದಮುಳ್ಳೂರು ಗ್ರಾ.ಪಂ. ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕೆದಮುಳ್ಳೂರು ಗ್ರಾ.ಪಂ. ಅಧ್ಯಕ್ಷರಾದ ಮಾಳೇಟಿರ ಜಫ್ರಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಸಾಧನೆಗಾಗಿ ಇಸ್ಮಾಯಿಲ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಅಲ್ಲದೆ ತಾಲೂಕು ಮಟ್ಟದ ಅತ್ಯುತ್ತಮ ಕಂಪ್ಯೂಟರ್ ಆಪರೇಟರ್ ಎಂಬ ವಿಶೇಷ ಪುರಸ್ಕಾರಕ್ಕೆ ಭಾಜನರಾದ ಕೆದಮುಳ್ಳೂರು ಗ್ರಾ.ಪಂ.ಯ ಡಾಟಾ ಎಂಟ್ರಿ ಆಪರೇಟರ್ ಬಿ.ಜಿ. ಕಾವ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಳೇಟಿರ ಜಫ್ರಿ ಉತ್ತಪ್ಪ, ಸತತವಾಗಿ ೩ನೇ ಬಾರಿಗೆ ಗ್ರಾ.ಪಂ. ಸದಸ್ಯರಾಗಿ ಚುನಾಯಿತರಾಗಿರುವ ಇಸ್ಮಾಯಿಲ್ ಅವರ ಸಾಧನೆ ಕೇವಲ ಗ್ರಾ.ಪಂ. ಮಟ್ಟದಲ್ಲಿ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಕೀರ್ತಿ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾ.ಪಂ. ಸದಸ್ಯರಾಗಿಯೂ ಕ್ರಿಯಾಶೀಲರಾಗಿರುವ ಅವರು ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವುದು ಅಭಿನಂದನಾರ್ಹ. ಅಲ್ಲದೆ, ಜನಪರವಾದ ಕಾಳಜಿಯಿಂದ ಅತ್ಯುತ್ತಮವಾದ ಸೇವೆ ಸಲ್ಲಿಸಿದ ಗ್ರಾ.ಪಂ. ಸಿಬ್ಬಂದಿಯಾಗಿರುವ ಕಾವ್ಯ ಅವರಿಗೆ ತಾಲೂಕು ಮಟ್ಟದ ಪುರಸ್ಕಾರ ಲಭಿಸಿದ್ದು ಕೂಡ ಗ್ರಾ.ಪಂ. ಹಿರಿಮೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷರಾದ ಪರಮೇಶ್ವರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ, ಹಿರಿಯ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಸಭಾ ಮುತ್ತಪ್ಪ, ಶೀಲಾ ಸೇರಿದಂತೆ ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.