ವೀರಾಜಪೇಟೆ, ಏ. ೨೩: ಬೇವಿನ ಮರಕ್ಕೆ ಬೆಲ್ಲದ ನೀರೆರೆದ ಮಾತ್ರಕ್ಕೆ ಬೇವು ಸಿಹಿಯಾಗದು. ಶಿಕ್ಷಣವಿದ್ದ ಮಾತ್ರಕ್ಕೆ ಉತ್ತಮ ಶಿಕ್ಷಕನಾಗಲಾರ ಜ್ಞಾನದೊಂದಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಇದ್ದಾಗ ಮಾತ್ರ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಅರಮೇರಿ ಕಳಂಚೇರಿ ಶ್ರೀ ಮಠದ ಪೀಠಾಧಿಪತಿಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ವೀರಾಜಪೇಟೆ ನಗರದ ಪಂಜರುಪೇಟೆಯಲ್ಲಿರುವ ಸರ್ವೋದಯ ಬಿಎಡ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೊಜಿಸಲಾಗಿದ್ದ ೨೦೨೫ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಶಿಕ್ಷಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಶಿಕ್ಷಕ ನಿಂತ ನೀರಾಗಬಾರದು, ಅಂತರAಗದ ಅರಿವಿರಬೇಕು, ಶಿಕ್ಷಣಕ್ಕಿಂತ ವ್ಯೆಕ್ತಿತ್ವ ಮುಖ್ಯ. ಸಮಾಜದೊಂದಿಗೆ ಬದಲಾಗಬೇಕು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲ ಎಂ.ಬಿ. ಕಾವೇರಪ್ಪ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಮೌಲ್ಯಯುತ ಶಿಕ್ಷಣ ವಿಶ್ವ ಮಾನವ ಸಂದೇಶ. ಮಾನವರಿಗೆ ಜ್ಞಾನದ ಶಕ್ತಿ ಅಗತ್ಯ. ಬುದ್ದಿವಂತಿಕೆಯನ್ನು ಜಾಗೃತ ಗೊಳಿಸಿದರೆ ಸಮಾಜಕ್ಕೆ ಉತ್ತಮನಾಗಲು ಸಾಧ್ಯ. ನಾನು, ನನ್ನದು, ನನ್ನಿಂದಲೇ ಎಲ್ಲಾ ಎನ್ನುವ ಅಹಂಭಾವವನ್ನು ದೂರಮಾಡಿ ತಮ್ಮ ಬದುಕಿನಲ್ಲಿ ಗುರಿ ಮುಟ್ಟುವಂತ ಆಲೋಚನೆಗಳನ್ನಿಟ್ಟು ಕೊಳ್ಳುವಂತಾಗ ಬೇಕು ಎಂದರು.
ಸರ್ವೋದಯ ಕಾಲೇಜಿನ ಪ್ರಾಂಶುಪಾಲೆ ಡಾ. ವಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ೩೧ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭ, ಮೌಲ್ಯಯುತ ಶಿಕ್ಷಣದಿಂದ ಸಮಾಜದಲ್ಲಿ ಉತ್ತಮ ಶಿಕ್ಷಕರಾಗಲು ಸಾಧ್ಯ. ಮುಂದೆ ಶಿಕ್ಷಕರಾದ ನಂತರ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಜೀವನ ಬೆಳಗು ವಂತಾಗಲಿ ಎಂದು ಆಶಿಸಿದರು.
ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಖಜಾಂಚಿ ಕೆ. ವಾಸಂತಿ ಶರತ್ ಚಂದ್ರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಪ್ರಾದ್ಯಾಪಕರಾದ ಕೆ.ಜಿ. ಮಿನಿ, ಆರ್. ಸುಜಾತ, ಪದ್ಮಲತಾ ಇದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಸಮೂಹ ಗಾಯನ, ಉಮ್ಮತಾಟ್ ನೃತ್ಯ, ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು.