ಕುಶಾಲನಗರ, ಮಾ ೧೮: ಕುಶಾಲನಗರದ ಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ವತಿಯಿಂದ ದಿ.ಡಾ.ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಶಿಬಿರ, ಮಧುಮೇಹ, ರಕ್ತದೊತ್ತಡ ತಪಾಸಣೆ ಹಾಗೂ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಸೋಮವಾರಪೇಟೆ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕ ಆರ್.ವಿ.ಗಂಗಾಧರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ದಾನಿಗಳು ಮುಂದಾಗಬೇಕಿದೆ. ರಕ್ತದಾನ ಮಾಡುವುದು ಮುಖ್ಯವಲ್ಲ. ದಾನ ಮಾಡಲು ಯೋಗ್ಯವಾದ ರಕ್ತ ಹೊಂದುವುದು ಅತಿಮುಖ್ಯ. ದುಶ್ಚಟಗಳಿಂದ ಹಾದಿ ತಪ್ಪುತ್ತಿರುವ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕಿದೆ.
ದೇಹ ಹಾಗೂ ಮನಸ್ಸನ್ನು ನಿಯಂತ್ರಿಸಬೇಕಿದೆ. ಆರೋಗ್ಯವಂತ ಜೀವನ ಶೈಲಿಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕಾದ ಅಗತ್ಯತೆ ಇದೆ ಎಂದು ಕರೆ ನೀಡಿದರು. ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಯ ರಕ್ತ ನಿಧಿ ಮುಖ್ಯಸ್ಥ ಡಾ.ಮಹಮ್ಮದ್ ಇಬ್ರಾಹಿಂ ಮಾತನಾಡಿ, ದಾನ ನೀಡುವ ರಕ್ತವನ್ನು ಶೇಕಡವಾರು ಬಳಸುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ಒದಗಿಸಿದರು. ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಗೌಡ ಸಮಾಜದ ಉಪಾಧ್ಯಕ್ಷರುಗಳಾದ ಸೆಟ್ಟೆಜನ ದೊರೆ ಗಣಪತಿ, ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಸಹ ಕಾರ್ಯದರ್ಶಿ ಡಾಟಿ ಶಾಂತಕುಮಾರಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಕುಟ್ಟಂಡ ಕನ್ನಿಕಾ ಅಯ್ಯಪ್ಪ, ವಲಯ ಅಧ್ಯಕ್ಷ ಸುಮನ್ ಬಾಲಚಂದ್ರ, ವಲಯ ರಾಯಭಾರಿ ಕೊಡಗನ ಹರ್ಷ, ಲಯನ್ಸ್ ಕಾರ್ಯದರ್ಶಿ ನಿತಿನ್ ಗುಪ್ತ, ಸಂಘ ಖಜಾಂಚಿ ಎಂ.ಜಿ.ಕಿರಣ್ ಸೇರಿದಂತೆ ಗೌಡ ಸಮಾಜದ ಪ್ರಮುಖರು, ಲಯನ್ಸ್ ಪದಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು.