ಮೈಸೂರು, ಮಾ. ೧೨: ಐಪಿಎಲ್ ಮಾದರಿಯಲ್ಲಿ ಪ್ರತಿಭಾನ್ವಿತ ಕೊಡವ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಆಯೋಜಿಸುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್-೨೦೨೫ ೨ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಶನಿವಾರ ನಡೆಯಿತು. ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ಫ್ರಾಂಚೈಸಿಗಳಾದ ಟೀಂ ಕೊಡವ ವಾರಿಯರ್ಸ್, ಟೀಂ ಕೂರ್ಗ್ ಯುನೈಟೆಡ್, ಟೀಂ ಕೊಡವ ಟ್ರೈಬ್, ಎಂಟಿಬಿ ರಾಯಲ್ಸ್, ಟೀಂ ವೈಲ್ಡ್ ಫ್ಲವರ್, ಟೀಂ ಪ್ರಗತಿ ಕ್ರಿಕೆರ‍್ಸ್, ಕೂರ್ಗ್ ಬ್ಲಾಸ್ಟರ್, ಕೊಡವ ರೈಸಿಂಗ್ ಸ್ಟಾರ್ಸ್, ವೆಸ್ಟ್ರನ್ ಘಾಟ್ ವಾರಿರ‍್ಸ್ ಹಾಗೂ ಟೀಂ ಲೆವರೇಜ್ ಪಾಲ್ಗೊಂಡಿದ್ದವು.
ರಣಜಿ ಹಾಗೂ ಕೌಂಟಿ ಕ್ರಿಕೆಟರ್‌ಗಳಾದ ಸಿ.ಎ. ಕಾರ್ತಿಕ್, ಸಿ.ಆರ್. ಅಯ್ಯಪ್ಪ, ಕೆ.ಎಸ್. ದೇವಯ್ಯ ಸೇರಿದಂತೆ ೧೮೦ಕ್ಕೂ ಹೆಚ್ಚು ಕೊಡವ ಕ್ರಿಕೆಟ್ ಆಟಗಾರರು ಹರಾಜಿನಲ್ಲಿ ಭಾಗವಹಿಸಿದ್ದು, ಫ್ರಾಂಚೈಸಿಗಳು ತಮ್ಮ ತಂಡಕ್ಕೆ ನೀಡಿದ್ದ ಮೊತ್ತಕ್ಕೆ ಸೀಮಿತವಾಗಿ ಐಪಿಎಲ್ ಮಾದರಿಯಲ್ಲೇ ಬಿಡ್ ಮಾಡುವ ಮೂಲಕ ಫೇವರಿಟ್ ಆಟಗಾರರನ್ನು ತಮ್ಮ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾದರು.
ರಣಜಿ ಆಟಗಾರ ಸಿ.ಎ. ಕಾರ್ತಿಕ್ ಕೂರ್ಗ್ ಬ್ಲಾಸ್ಟರ್ಸ್ ತಂಡದ ನಾಯಕರಾಗಿ ಆಯ್ಕೆಯಾದರೆ, ಸಿ.ಆರ್. ಅಯ್ಯಪ್ಪ ವೆಸ್ಟ್ರನ್ ಘಾಟ್ ವಾರಿಯರ್ಸ್ ತಂಡಕ್ಕೆ ಸೇರ್ಪಡೆಯಾದರು. ಪ್ರತೀ ಫ್ರಾಂಚೈಸಿಯೂ ೧೪ ರಿಂದ ೧೭ ಮಂದಿ ಆಟಗಾರರನ್ನು ಖರೀದಿಸುವ ಮೂಲಕ ೨ನೇ ಆವೃತ್ತಿಯ ಕೊಡವ ಕ್ರಿಕೆಟ್ ಲೀಗ್‌ಗೆ ಮುನ್ನುಡಿ ಬರೆದರು.
ಲೀಗ್‌ನಲ್ಲಿ ೧೫ ವರ್ಷದಿಂದ ೬೦ ವರ್ಷದೊಳಗಿನ ಕ್ರಿಕೆಟರ್‌ಗಳು ಭಾಗವಹಿಸಲು ಅವಕಾಶ ನೀಡಿದ್ದು, ಇಬ್ಬರು ಮಹಿಳಾ ಕ್ರಿಕೆಟರ್‌ಗಳು ಈ ಬಾರಿ ಆಡುತ್ತಿರುವುದು ವಿಶೇಷ ವಾಗಿದೆ. ಐಪಿಎಲ್ ಮಾದರಿಯಲ್ಲೇ ಟಿ೨೦ ಲೀಗ್ ಇದಾಗಿದ್ದು, ೧೦-೧೨ ದಿನಗಳ ಕಾಲ ಕ್ರಿಕೆಟ್ ಅಭಿಮಾನಿಗಳ ಮನಸೂರೆಗೊಳ್ಳಲಿದೆ.
ಏ.೧ ರಿಂದ ಆರಂಭ: ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-೨ ಏ.೧ರಿಂದ ಆರಂಭವಾಗಲಿದೆ ಎಂದು ಕೂರ್ಗ್ ಕ್ರಿಕೆಟ್ ಫೌಂಡೇಷನ್ ಅಧ್ಯಕ್ಷ ಪೊರುಕೊಂಡ ಸುನಿಲ್ ತಿಳಿಸಿದರು.
ಕೊಡವ ಸಮುದಾಯ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರರನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗುತ್ತಿದೆ. ಕೊಡಗಿನ ಕ್ರಿಕೆಟ್ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟçಮಟ್ಟ ಹಾಗೂ ಅಂತಾರಾಷ್ಟಿçÃಯ ಮಟ್ಟಕ್ಕೆ ಬೆಳೆಸುವ ಮುಖ್ಯ ಉದ್ದೇಶವನ್ನು ಕೂರ್ಗ್ ಕ್ರಿಕೆಟ್ ಫೌಂಡೇಷನ್ ಹೊಂದಿದೆ ಎಂದು ಮಾಹಿತಿ ನೀಡಿದರು. ೨ನೇ ಆವೃತ್ತಿಯ ಮೊದಲ ಹಂತವಾಗಿ ಹರಾಜು ಪ್ರಕ್ರಿಯೆ ನಡೆದಿದ್ದು, ೧೦ ಫ್ರಾಂಚೈಸಿಗಳು ಹಾಗೂ ೧೮೦ಕ್ಕೂ ಹೆಚ್ಚು ಕೊಡವ ಕ್ರಿಕೆಟ್ ಪಟುಗಳು ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಕೊಡಗಿನ ಪಾಲಿಬೆಟ್ಟದ ಟಾಟಾ ಕಾಫಿ ಕ್ರಿಕೆಟ್ ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಸದ್ಯದಲ್ಲಿಯೇ ವೇಳಾ ಪಟ್ಟಿಯನ್ನು ಅಂತಿಮಗೊಳಿಸ ಲಾಗುವುದು ಎಂದು ತಿಳಿಸಿದರು.
ಈ ವೇಳೆ ಕೂರ್ಗ್ ಕ್ರಿಕೆಟ್ ಫೌಂಡೇಷನ್‌ನ ಪಾಲಚಂಡ ಜಗನ್ ಉತ್ತಪ್ಪ, ಮಡ್ಲಂಡ ದರ್ಶನ್, ಚೆರ್‌ಮಂದAಡ ಸೋಮಣ್ಣ, ಚಂಡಿರ ರಚನ್, ಬಲ್ಲಂಡ ರೀನಾ ದೇವಯ್ಯ, ಕುಲ್ಲೇಟಿರ ಶಾಂತ ಕಾಳಪ್ಪ, ಕೀತಿಯಂಡ ಗಣಪತಿ, ಅಣ್ಣಳಮಾಡ ರಾಯ್ ಚಿಣ್ಣಪ್ಪ ಮತ್ತಿತರರಿದ್ದರು.