ಪೊನ್ನಂಪೇಟೆ, ಮಾ. ೧೦: ಪೊನ್ನಂಪೇಟೆಯ ಸರ್ಕಾರಿ ಶಾಲಾ ಮೈದಾನದಲ್ಲಿ ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು ಆಟೋ ಚಾಲಕರು ಹಾಗೂ ಮಾಲೀಕರಿಗಾಗಿ ಆಯೋಜಿಸಲಾಗಿರುವ ಎರಡು ದಿನಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಆಟೋ ಚಾಲಕರ ಒತ್ತಡ ನಿವಾರಣೆಗೆ ಇಂತಹ ಕ್ರೀಡಾಕೂಟಗಳು ಅಗತ್ಯವಾಗಿದ್ದು, ಆಟೋ ಚಾಲಕರ ನಡುವೆ ಸ್ನೇಹ ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು. ನಂತರ ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭ ಉದ್ಯಮಿ ಚೊಟ್ಟೆಯಂಡಮಾಡ ಕುಶ, ಸಂಘದ ಉಪಾಧ್ಯಕ್ಷ ಚಮ್ಮಟ್ಟಿರ ಶಾಂತ ಪೊನ್ನಪ್ಪ, ಕಾರ್ಯದರ್ಶಿ ಬಿ.ಎಸ್. ಸುರೇಶ್, ಸಹಕಾರ್ಯದರ್ಶಿ ಚೀರಂಡ ಚಂಗಪ್ಪ, ಕ್ರೀಡಾ ಸಂಚಾಲಕ ಪೆಮ್ಮಂಡ ಉಮೇಶ್, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.