ಕಣಿವೆ, ಮಾ. ೧೦ : ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ನೌಕರರ ಸಂಘದ ಕುಶಾಲನಗರ ಪ್ರಾಥಮಿಕ ಸಮಿತಿಯ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಸುರಕ್ಷತಾ ಸಭೆ ಕುಶಾಲನಗರದ ಚೆಸ್ಕಾಂ ವಿಭಾಗೀಯ ಕಚೇರಿ ಆವರಣದಲ್ಲಿ ನಡೆಯಿತು.
ನೂತನ ನೌಕರರ ಸಂಘದ ಕಚೇರಿಯನ್ನು ಮಡಿಕೇರಿ ವಿಭಾಗದ ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕು ಎಂದರು. ಮಡಿಕೇರಿ ವಿಭಾಗಕ್ಕೆ ಉತ್ತಮವಾದ ಹೆಸರಿದೆ. ಎಲ್ಲಾ ಸಂದರ್ಭಗಳಲ್ಲಿ ನೌಕಕರು ತಮ್ಮ ಹೆಚ್ಚಿನ ಪರಿಶ್ರಮದ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಮುಂದೆಯೂ ಕೂಡ ಗ್ರಾಹಕರ ಕುಂದುಕೊರತೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಸೇವೆ ಒದಗಿಸುವುದರೊಂದಿಗೆ ಕರ್ತವ್ಯದ ಸಂದರ್ಭ ಸುರಕ್ಷತೆಗೆ ಒತ್ತು ನೀಡಬೇಕಿದೆ. ಸಂಘಟನೆ ಮೂಲಕ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಘಟಕದ ಪ್ರಾಥಮಿಕ ಸಮಿತಿ ಅಧ್ಯಕ್ಷ ಕುದುಪಜೆ ಲವಕುಮಾರ್ ಮಾತನಾಡಿ, ದಿನದ ೨೪ ಗಂಟೆಯೂ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಕೆಪಿಟಿಸಿಎಲ್ ನೌಕರರ ಸಂಘಟನೆ ಹಾಗೂ ಭದ್ರತೆಗಾಗಿ ಸಂಘ ಶ್ರಮಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್, ಸೋಮವಾರಪೇಟೆ ಹಾಗೂ ಮಡಿಕೇರಿ ವಿಭಾಗದ ವಿನಯ್ ಕುಮಾರ್, ಕುಶಾಲನಗರ ವಿಭಾಗದ ಮಂಜುನಾಥ್ ಹಾಗೂ ವೀರಾಜಪೇಟೆ ವಿಭಾಗದ ಸುರೇಶ್ ಅವರನ್ನು ಗೌರವಿಸಲಾಯಿತು. ರಾಜ್ಯ ಸಂಘದ ಮುಖಂಡರಾದ ಸಂದೀಪ್, ಸತ್ಯನಾರಾಯಣ, ಶರಣಬಸಪ್ಪ, ಮಹೇಶ್, ಕೊಡಗು ಸಂಘಟನಾ ಕಾರ್ಯದರ್ಶಿ ಕೃಷ್ಣರಾಜು ಮಾತನಾಡಿದರು.
ಈ ಸಂದರ್ಭ ಸಮಿತಿಯ ಹಾಸನ ಸಂಘಟನಾ ಕಾರ್ಯದರ್ಶಿ ಪ್ರವೀಣ್, ಮೈಸೂರು ಮುಖಂಡರಾದ ವೆಂಕಟೇಶ್, ಮುರಳಿಕೃಷ್ಣ, ಮಡಿಕೇರಿ ಸಮಿತಿ ಅಧ್ಯಕ್ಷ ಶಿವಾನಂದ, ಕಾರ್ಯದರ್ಶಿ ಜಿ.ಯು. ಸುದೀಪ್ ಕುಮಾರ್ ಮಹಾದೇವಯ್ಯ ಕೊಳ್ಳೇಗಾಲ, ರತ್ನಯ್ಯ ಮಡಿಕೇರಿ, ಗಣೇಶ್, ಪ್ರಕಾಶ್, ಸಹಾಯಕ ಲೆಕ್ಕಾಧಿಕಾರಿ ಪ್ರದೀಪ್, ಸಹಾಯಕ ಇಂಜಿನಿಯರ್, ನೀತು ಸೋಮೇಶ್, ರಾಣಿ, ಹೇಮಂತ್, ತೀರ್ಥಕುಮಾರ್, ಗೌರಿ ಶಂಕರ್, ರಮೇಶ್ ಸುಂಟಿಕೊಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಬಿ. ಕೃಷ್ಣರಾಜ, ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ವಸಂತ ರೈ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಅಧಿಕಾರಿಗಳು, ಸಮಿತಿ ಪ್ರಮುಖರು, ನಿವೃತ್ತ ನೌಕರರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.