ಮಡಿಕೇರಿ, ಮಾ. ೯: ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಸರ್ಕಾರ ಇತ್ತೀಚೆಗೆ ಕೊಡಗು ವಿಶ್ವವಿದ್ಯಾನಿಲಯವನ್ನು ಮುಚ್ಚಲು ತೀರ್ಮಾನಿಸಿದೆ ಎಂಬ ವಿಚಾರ ತಾ. ೧೦ರಂದು (ಇಂದು) ರಾಜ್ಯ ವಿಧಾನಪರಿಷತ್ನಲ್ಲಿ ಚರ್ಚೆಗೆ ಬರಲಿದೆ. ವಿಶ್ವವಿದ್ಯಾನಿಲಯ ಮುಚ್ಚುವ ತೀರ್ಮಾನವನ್ನು ಕೈ ಬಿಡಬೇಕೆಂದು ಹಾಗೂ ವಿದ್ಯಾರ್ಥಿಗಳ ಮತ್ತು ನಿರುದ್ಯೋಗಿಗಳ ಹಿತದೃಷ್ಟಿ ಯಿಂದ ಸದರಿ ವಿಶ್ವ ವಿದ್ಯಾನಿಲಯ ವನ್ನು ಅಭಿವೃದ್ಧಿ ಪಡಿಸಲು ಅನುದಾನ ಒದಗಿಸುವ ಕುರಿತು ಉನ್ನತ ಶಿಕ್ಷಣ ಸಚಿವರ ಗಮನ ಸೆಳೆಯಲಾಗುತ್ತಿದೆ.
ಈ ಬಗ್ಗೆ ಕೊಡಗಿನ ವಿಧಾನಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಅವರು ಮಂಡಿಸಿರುವ ಗಮನ ಸೆಳೆಯುವ ಸೂಚನೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ. ಸುಜಾ ಕುಶಾಲಪ್ಪ ಅವರೊಂದಿಗೆ ಸದಸ್ಯರುಗಳಾದ ಎಸ್.ಎಲ್. ಭೋಜೇಗೌಡ, ಶಶೀಲ್ ಜಿ ನಮೋಶಿ ಎಸ್.ವಿ. ಸಹನೂರ, ಡಿ.ಎಸ್. ಅರುಣ್ ಮತ್ತು ಡಾ. ಧನಂಜಯ ಸರ್ಜಿ ಅವರುಗಳು ಗಮನ ಸೆಳೆಯುವ ಸೂಚನೆ ಮಂಡಿಸಿದ್ದು, ಈ ವಿಚಾರದ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಅಪರಾಹ್ನದ ವೇಳೆಗೆ ಈ ವಿಚಾರ ಚರ್ಚೆಗೆ ಬರಲಿದೆ.