ಮಡಿಕೇರಿ, ಮಾ. ೯: ಗಣಕ ವಿಜ್ಞಾನದ ಹೊಸ ಆವಿಷ್ಕಾರವಾಗಿರುವ ಕೃತಕ ಬುದ್ಧಿಮತ್ತೆ (ಎ. ಐ.) ಇದೀಗ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಕೃತಕತೆಯ ಹೊಸ ಪ್ರಪಂಚವೇ ಸೃಷ್ಟಿಯಾಗತೊಡಗಿದೆ. ಈ ಕೃತಕ ಬುದ್ಧಿಮತ್ತೆಯ ಲೋಕದಲ್ಲಿ ಪತ್ರಿಕೋದ್ಯಮವನ್ನು ಮುಂದುವರಿಸುವುದು ಬಹುದೊಡ್ಡ ಸವಾಲಿನ ಕೆಲಸ ಎಂದು ಹಿರಿಯ ಪತ್ರಕರ್ತರೂ ಆಗಿರುವ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯಲ್ಲಿ ನಡೆದ ಪತ್ರಕರ್ತ ಯಜಾಸ್ ದುದ್ದಿಯಂಡ ಸಂಪಾದಕತ್ವದಲ್ಲಿ ನೂತನವಾಗಿ ಆರಂಭಗೊAಡಿರುವ ಕೂರ್ಗ್ ಬಝ್ ಎಂಬ ಸುದ್ದಿಜಾಲದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಎ. ಐ. ಮೂಲಕ ಸುಳ್ಳನ್ನೇ ಸತ್ಯವಾಗಿಸುವ ವಾತಾವರಣ ಸೃಷ್ಟಿಯಾಗಿದೆ. ಮನುಷ್ಯನ ಬುದ್ಧಿಮತ್ತೆಯ ಎಲ್ಲಾ ಸಾಮರ್ಥ್ಯಗಳನ್ನು ಮರು ರಚಿಸಲು ಎ. ಐ. ಗೆ ಸಾಧ್ಯವಾಗುತ್ತಿದೆ. ಇದು ಪತ್ರಿಕೋದ್ಯಮಕ್ಕೆ ಬಹುದೊಡ್ಡ ಸವಾಲೊಡ್ಡುತ್ತದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಿ ತನ್ನ ಮೂಲ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಾಗಿರುವುದು ಪತ್ರಿಕೋದ್ಯಮದ ಇಂದಿನ ಅನಿವಾರ್ಯತೆಯಾಗಿದೆ ಎಂದು ಒತ್ತಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಿತ್ತಳೆನಾಡು ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕ ಕುವೇಂಡ ವೈ. ಹಂಝತುಲ್ಲಾ ಮಾತನಾಡಿ, ಇಂದಿನ ವಿದ್ಯಾವಂತರೆಲ್ಲರನ್ನೂ ಸುಶಿಕ್ಷಿತರೆಂದು ಹೇಳಲು ಸಾಧ್ಯವಿಲ್ಲ. ಮಾನವೀಯತೆ ಮತ್ತು ಸಂಸ್ಕಾರವಿಲ್ಲದ ಯಾವುದೇ ಶಿಕ್ಷಣ ಅರ್ಥಹೀನವಾಗಿರುತ್ತದೆ. ಇದು ಪತ್ರಿಕೋದ್ಯಮವನ್ನೂ ಹೊರತುಪಡಿಸಿಲ್ಲ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ, ಅತಿ ವೇಗವಾಗಿ ಬೆಳೆಯುತ್ತಾ ಜನಪ್ರಿಯತೆ ಗಳಿಸುತ್ತಿರುವ ಅಂತರ್ಜಾಲ ಸುದ್ದಿತಾಣಗಳು ವಸ್ತುನಿಷ್ಠ ವರದಿಗೆ ಪ್ರಥಮ ಆದ್ಯತೆ ನೀಡಬೇಕು. ದೃಶ್ಯ ಮತ್ತು ಮುದ್ರಣ ಮಾಧ್ಯಮ ಸೇರಿದಂತೆ ಆನ್ಲೈನ್ ಸುದ್ದಿ ಜಾಲಗಳಲ್ಲಿ ಬರುವ ವರದಿಗಳನ್ನು ನಂಬುವುದು ಕೊಡಗಿನ ಜನರ ವಾಡಿಕೆಯಾಗಿದೆ. ಆದ್ದರಿಂದ ಯಾವುದೇ ಸುದ್ದಿ ಜಾಲಗಳು ಕೊಡಗಿನ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದರು.
ಸುದ್ದಿ ಜಾಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪತ್ರಿಕೋದ್ಯಮ ಉಪನ್ಯಾಸಕರಾಗಿದ್ದ ಪೊನ್ನಂಪೇಟೆಯ ಐನಂಡ ಸೋಮಣ್ಣ, ಆಧುನಿಕತೆಯಲ್ಲಿ ಪತ್ರಿಕೋದ್ಯಮದ ರೂಪ ಬದಲಾದಂತೆ ಇಂದು ಓದುಗರ ಮನಸ್ಥಿತಿಯು ಬದಲಾಗಿದೆ. ಇದನ್ನು ಇಂದಿನ ಪತ್ರಕರ್ತರು ತಿಳಿದುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ತಂತ್ರಜ್ಞಾನ ಬಳಕೆಯಿಂದ ಕನ್ನಡ ಪತ್ರಿಕೋದ್ಯಮ ಶರವೇಗದಲ್ಲಿ ಬೆಳೆದಿದ್ದು, ಇಂದಿನ ಸುದ್ದಿಜಾಲಗಳು ಕ್ಷಣಾರ್ಧದಲ್ಲಿ ಸುದ್ದಿಗಳನ್ನು ಜಗತ್ತಿಗೆ ಮುಟ್ಟಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಮಡಿಕೇರಿಯ ಶ್ರೀಕ್ಷೇತ್ರ ರಾಜರಾಜೇಶ್ವರಿ ದೇವಾಲಯ ಧರ್ಮದರ್ಶಿಗಳಾದ ಹೆಚ್.ಎನ್ ಗೋವಿಂದಸ್ವಾಮಿ, ಯಜಾಸ್ ದುದ್ದಿಯಂಡ ಹಾಗೂ ಇತರರು ಮಾತನಾಡಿದರು.