ಮಡಿಕೇರಿ, ಫೆ. ೧೦: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ೯,೨೧೭ ಸದಸ್ಯರಿದ್ದರೂ ೪೮೭ ಮಂದಿಗೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವಿದೆ. ಶೇ.೮ ರಷ್ಟು ಸದಸ್ಯರು ಮಾತ್ರ ಸಂಘದ ಭವಿಷ್ಯ ನಿರ್ಣಯದಲ್ಲಿ ಪಾತ್ರ ವಹಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಂಘದ ಸದಸ್ಯ ಎಂ.ಕೆ. ಅಪ್ಪಚ್ಚು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘದಲ್ಲಿ ವ್ಯವಹಾರ ನಡೆಸಿಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಿ ಚುನಾವಣೆಯಲ್ಲಿ ಕೇವಲ ೪೮೭ ಮಂದಿ ಮಾತ್ರ ಮತ ಹಾಕಲು ಅರ್ಹರಿದ್ದಾರೆ. ಹಿರಿಯರಾದಂತಹ ಮಾಜಿ ಸಚಿವ ಎಂ.ಸಿ ನಾಣಯ್ಯ ಅವರಿಗೂ ಚುನಾವಣೆಯಲ್ಲಿ ಮತ ಹಾಕಲು ಅವಕಾಶವಿಲ್ಲದಿರುವುದು ಸಮಂಜಸವಲ್ಲ. ೧೦ ವರ್ಷಗಳ ಹಿಂದೆ ಮೃತಪಟ್ಟಿರುವ ಉತ್ತಪ್ಪ ಎಂಬವರು, ಸಂಘದಲ್ಲಿ ವ್ಯವಹಾರ ನಡೆಸಿದ್ದಾರೆಂಬುದಾಗಿ ವರದಿಯಲ್ಲಿ ದಾಖಲಾಗಿದ್ದು, ಅವರಿಗೆ ಮತ ಹಾಕುವ ಅವಕಾಶವಿರುವುದು ಅಚ್ಚರಿಯ ಸಂಗತಿ ಎಂದ ಅವರು, ಅರ್ಹ ಸದಸ್ಯರು ಮತ ಹಾಕುವುದರಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಕೊಡಗಿನ ಸಣ್ಣ ಬೆಳೆಗಾರರಿಗೆ ರಾಷ್ಟಿçÃಕೃತ ಬ್ಯಾಂಕ್‌ಗಳು ಸಾಲ ನೀಡದಿದ್ದ ಅವಧಿಯಲ್ಲಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಸಾಲ ನೀಡಿದ್ದರಿಂದ ಜಿಲ್ಲೆಯ ಕಾಫಿ ಬೆಳೆಗಾರರು ಅಭಿವೃದ್ಧಿಯಾಗಿದ್ದರು. ಕೊಡಗಿನ ಸಹಕಾರಿ ಧುರೀಣ ಎ.ಎನ್. ಸೋಮಯ್ಯನಂತವರು ಹುಣಸೂರು ಉದ್ದಿಮೆಯ ಖರೀದಿಗೆ ಸ್ವಂತ ಹಣ ಹಾಕಿ ಸಂಘ ಬೆಳೆಸಿದ ಉದಾಹರಣೆಯಿದೆ. ಅದರೆ ಸಮರ್ಥ ಸಹಕಾರಿ ನಾಯಕತ್ವದ ಕೊರತೆ, ರಾಜಕೀಯ ಹಸ್ತಕ್ಷೇಪ ಮತ್ತು ದುರಾಡಳಿತದ ಫಲವಾಗಿ ಈ ಸಂಘ ಅವನತಿ ಹಾದಿಯಲ್ಲಿರುವುದರಿಂದ ಈ ಸಾಲಿನ ಚುನಾವಣೆ ಅತ್ಯಂತ ನಿರ್ಣಾಯಕವಾದದ್ದು ಎಂದು ಅವರು ಹೇಳಿದರು.

ನಾಪೋಕ್ಲು ಹೋಬಳಿಯ ಕೊಳಕೇರಿ ಗ್ರಾಮದ ಕಲಿಯಂಡ ಪಿ. ಚಿಣ್ಣಪ್ಪನವರ ವಿಳಾಸ ಸಂಪಾಜೆ ಹೋಬಳಿಯ ಕಾಟಕೇರಿ ಗ್ರಾಮ ಎಂದು ನಮೂದಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ಅರ್ಹ ಮತದಾರರ ಪಟ್ಟಿಯಲ್ಲಿ ಸುಂಟಿಕೊಪ್ಪ ಸಮೀಪದ ಹೊರೂರು ಗ್ರಾಮದ ಚೇರಂಡ ಎಂ. ಉತ್ತಪ್ಪನವರ ಹೆಸರಿದ್ದು, ಅವರು ಸಂಘದಲ್ಲಿ ೨೦೨೩-೨೪ನೇ ಸಾಲಿನಲ್ಲಿ ವ್ಯವಹಾರ ಮಾಡಿರುವುದಾಗಿ ದಾಖಲಾಗಿದೆ. ಆದರೆ ಉತ್ತಪ್ಪನವರು ಮೃತಪಟ್ಟು ಹತ್ತು ವರುಷಕ್ಕೂ ಮೇಲಾಗಿದೆ. ಇದೇ ರೀತಿಯಲ್ಲಿ ಕೊಳಕೇರಿ ಗ್ರಾಮದ ಹಲವು ಅರ್ಹ ಸದಸ್ಯರನ್ನು ಕಾಟಕೇರಿ ಗ್ರಾಮದ ವಿಳಾಸದಲ್ಲಿ ನಮೂದಿಸಲಾಗಿದೆ. ಇದರಿಂದ ಅರ್ಹ ಸದಸ್ಯರನ್ನು ಚುನಾವಣಾ ಮಾಹಿತಿಯಿಂದ ಚುನಾವಣಾ ಕಣಕ್ಕಿಳಿಯುವ ಅವಕಾಶದಿಂದ ಮತ್ತು ಮತದಾನದಿಂದ ವಂಚಿತರಾಗಲಿದ್ದಾರೆ ಎಂದರು.

ಹೆಬ್ಬಾಲೆ ಉದ್ದಿಮೆಗೆ ೧೯೮೨-೮೩ನೇ ಸಾಲಿನಲ್ಲಿ ಪಡೆದ ರೂಪಾಯಿ ೧,೨೭,೮೪,೦೦೦.೦೦ ಸಾಲದಲ್ಲಿ ಅಸಲು ಮತ್ತು ಬಡ್ಡಿ ಸೇರಿ ಈವರೆಗೆ ಕೇವಲ ರೂಪಾಯಿ ೧,೪೨,೯೩,೭೭೪.೦೦, ಪಾವತಿಸಲಾಗಿದೆ. ೨,೦೩,೯೪,೩೦೨.೦೦ ಬಾಕಿಯಿದೆ. ಅಲ್ಲದೆ ಸರಕಾರದಿಂದ ಪಡೆದ ಪಾಲು ಬಂಡವಾಳ ಮತ್ತು ಅದರ ಡಿವಿಡೆಂಟ್ ಸೇರಿ ರೂಪಾಯಿ ೪,೧೧,೭೧,೩೦೨.೦೦ ಬಾಕಿಯಿದೆ. (೨೦೨೩-೨೪೦)ರಲ್ಲಿ ರೂ. ೨೮,೯೦೯೧೯.೦೦ ಲಾಭಗಳಿಸಿದೆ ಎಂದು ಸಂಘದ ಆಡಳಿತ ಮಂಡಳಿ ಹೇಳಿಕೊಳ್ಳುತ್ತಿದೆ. ಆದರೆ ೨೦೨೪ರ ಮಾರ್ಚ್ ಅಂತ್ಯಕ್ಕೆ ಸಂಘದ ಒಟ್ಟು ಕ್ರೊಢೀಕೃತ ನಷ್ಟ ೧೩,೧೩,೫೯,೬೧೫.೦೦ ರೂಪಾಯಿಗೇರಿದೆ. ಈ ರೀತಿಯಲ್ಲಿ ಸಾಲದಲ್ಲಿ ಮುಳುಗಿರುವ ಸಂಘ ಇದೀಗ ಮತ್ತಷ್ಟು ಸಾಲಪಡೆದು ಅಮ್ಮತ್ತಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಹೊರಟಿದೆ. ಒಂದೊಮ್ಮೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದ, ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಸಹಕಾರಿ ಸಂಘವೆAಬ ಹೆಗ್ಗಳಿಕೆಯ ಸಂಘ ಈಗ ಸಾಲದ ಸುಳಿಯಲ್ಲಿ ಸಿಲುಕಿರುವುದು ಮತ್ತು ಅದರ ಮರುಪಾವತಿಗೆ ಸ್ಪಷ್ಟ ಯೋಜನೆ ರೂಪಿಸದಿರುವುದಕ್ಕೆ ಈಗಿನ ಆಡಳಿತ ಮಂಡಳಿಯ ವೈಫಲ್ಯವೇ ಕಾರಣ ಎಂದರು.

ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಬೃಹತ್ ಪ್ರಮಾಣದ ಚರ ಮತ್ತು ಸ್ಥಿರ ಆಸ್ತಿ ಹೊಂದಿದೆ. ಸಂಘ ಕಾಫಿ ಸಂಸ್ಕರಣೆ ನಡೆಸದಿರುವ ಕಾರಣ ಇವುಗಳಲ್ಲಿ ಬಹುಪಾಲು ಆಸ್ತಿಯನ್ನು ಬಾಡಿಗೆ ನೀಡಲಾಗಿದೆ. ಇದರಿಂದಲೇ ಸಂಘಕ್ಕೆ ಮಾಸಿಕ ಹತ್ತು ಲಕ್ಷಕ್ಕೂ ಅಧಿಕ ಬಾಡಿಗೆ ಲಭಿಸುತ್ತಿದೆ. ಹುಣಸೂರು ಮತ್ತು ಹೆಬ್ಬಾಲೆಯಲ್ಲಿನ ಪೆಟ್ರೋಲ್ ಬಂಕ್‌ನಲ್ಲಿ ೫೬ ಲಕ್ಷ ಮತ್ತು ಕಾಫಿ ವ್ಯಾಪಾರಲ್ಲಿ ೧.೫ ಲಕ್ಷ ಲಾಭ ಪಡೆಯಲಾಗುತ್ತಿದೆ. ಆದರೆ ರೂಪಾಯಿ ೪೬ಲಕ್ಷವನ್ನು ಸಿಬ್ಬಂದಿಯ ವೇತನ ಮತ್ತು ಇತರ ಸೌಲಭ್ಯಕ್ಕೆ ಪಾವತಿಸುತ್ತಿರುವುದರಿಂದ ಸಂಘಕ್ಕೆ, ಸದಸ್ಯರಿಗೆ ಲಾಭವಾಗುತ್ತಿಲ್ಲ. ಕಟ್ಟಡ ಮತ್ತು ನಿವೇಶನದ ಬಾಡಿಗೆ ನೀಡುವ ವಿಚಾರದಲ್ಲಿಯೂ ಸಂಘದ ಆಡಳಿತ ಮಂಡಳಿ ಎಡವಿದ್ದು, ಸುಮಾರು ೩೦ ಲಕ್ಷ ಬಾಡಿಗೆ ಬಾಕಿ ಉಳಿದಿದೆ. ಇದರ ವಸೂಲಾತಿಗೆ ಆಡಳಿತ ಮಂಡಳಿ ಯಾವ ನಿಖರ ಯೋಜನೆಯನ್ನು ರೂಪಿಸಿಲ್ಲ. ಸಂಘದ ಆಸ್ತಿಯ ಬಾಡಿಗೆ ನೀಡಲು ಟೆಂಡರ್ ಕರೆಯದಿರುವ ಕಾರಣ ಸಂಘದ ಆಸ್ತಿಗೆ ಸ್ಪರ್ಧಾತ್ಮಕ ಬಾಡಿಗೆ ಲಭಿಸುತ್ತಿಲ್ಲ. ಈ ಬಗ್ಗೆ ಸಂಘ ನ್ಯಾಯಾಲಯದಲ್ಲಿ ಹೂಡಿರುವ ದಾವೆಗಳನ್ನು ಸರಿಯಾಗಿ ನಿರ್ವಹಿಸದಿರುವ ಕಾರಣ ಯಾವ ಪ್ರಕರಣದಲ್ಲಿಯೂ ಯಶಸ್ಸು ಲಭಿಸುತ್ತಿಲ್ಲ ಎಂದು ದೂರಿದರು.

ಸಂಘವು ಹಲವಾರು ವರ್ಷಗಳಿಂದ ಸಾಲದ ಸುಳಿಯಲ್ಲಿ ಮುಳುಗಿದ್ದು, ಸಾಲದ ಬಡ್ಡಿ ಮನ್ನ ಮಾಡಿಸಲು ಆಡಳಿತವು ವಿಫಲಗೊಂಡಿದೆ. ಈ ಬಾರಿ ತಾ.೧೬ ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ರಹಿತವಾಗಿ ಸದಸ್ಯರು ಮತ ಚಲಾಯಿಸಬೇಕೆಂದರು. ಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಟಿ.ಎಂ ಸೋಮಯ್ಯ ಅವರು ಹಾಜರಿದ್ದರು.