ಕುಶಾಲನಗರ, ಫೆ. ೧೦ : ದೇಹ ದಾನ ಮಾಡುವ ಮೂಲಕ ಸಾವಿನಲ್ಲೂ ಮಹಿಳೆ ಸಾರ್ಥಕತೆ ತೋರಿ ಮಾದರಿಯಾಗಿದ್ದಾರೆ. ಕುಶಾಲನಗರ ಕರಿಯಪ್ಪ ಬಡಾವಣೆಯ ನಿವಾಸಿ ಬೊಪ್ಪನ ಲಲಿತ (೬೭) ಮೃತ ಮಹಿಳೆಯಾಗಿದ್ದು ಕಳೆದ ಹಲವು ವರ್ಷಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ತಾನು ಸಾವನ್ನಪ್ಪಿದಾಗ ದೇಹವನ್ನು ದಾನ ಮಾಡುವುದಾಗಿ ಲಲಿತ ಅವರು ತಿಳಿಸಿದಂತೆ ಕುಟುಂಬ ಸದಸ್ಯರು ಇದೀಗ ಮಹಿಳೆಯ ದೇಹವನ್ನು ಮಡಿಕೇರಿಯ ವೈದ್ಯಕೀಯ ಸಂಸ್ಥೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ.
ಪುತ್ರ ಶ್ರೀನಿವಾಸ್ ಶರತ್ ಅವರ ವಿವಾಹ ತಾ. ೧೦ ರಂದು ಸಿದ್ದಾಪುರದಲ್ಲಿ ನಿಗದಿಯಾಗಿತ್ತು. ಅನಾರೋಗ್ಯ ಹಿನ್ನೆಲೆ ಲಲಿತಾ ಅವರು ಮನೆಯಲ್ಲಿಯೇ ಇದ್ದರು. ಮದುವೆ ನಡೆದ ನಂತರ ಲಲಿತಾ ಅವರು ಇಹಲೋಕ ತ್ಯಜಿಸಿರುವುದು ಕುಟುಂಬ ಸದಸ್ಯರಲ್ಲಿ ಮತ್ತಷ್ಟು ದುಃಖ ತರಿಸಿದೆ. ಮೃತರ ಪತಿ ಗಣೇಶ್ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದು, ಇಬ್ಬರು ಪುತ್ರಿ, ಓರ್ವ ಪುತ್ರನನ್ನು ಅಗಲಿದ್ದಾರೆ. -ಸಿಂಚು