ಮಡಿಕೇರಿ, ಫೆ. ೫: ಮಡಿಕೇರಿ ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೬೯.೫ ವೆಚ್ಚದÀ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಡಾ. ಮಂತರ್ ಗೌಡ, ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಮೂಲಭೂತ ಸೌಕರ್ಯ ವನ್ನು ಶೇ. ೧೦೦ ರಷ್ಟು ಒದಗಿಸುವುದು ಆದ್ಯತೆಯಾಗಿದ್ದು, ಇದನ್ನು ಪೂರ್ಣಗೊಳಿಸಲು ಬದ್ಧನಿದ್ದೇನೆ ಎಂದು ತಿಳಿಸಿದರು. ಮುಖ್ಯ ಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸದಸ್ಯರು ಕೊಡಗಿನ ಅಭಿವೃದ್ಧಿ ಬಗ್ಗೆ ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ ಎಂದರು. ನೂತನವಾಗಿ ನಿರ್ಮಾಣ ವಾಗುತ್ತಿರುವ ಹೊಸ್ಕೇರಿ ಪಂಚಾಯಿತಿ ಕಟ್ಟಡದ ಕಾಮಗಾರಿ ಯನ್ನು ವೀಕ್ಷಿಸಿದ ಶಾಸಕರು ಗುಣಮಟ್ಟ ಕಾಯ್ದು ಕೊಳ್ಳುವಂತೆ ಸೂಚಿಸಿದರು. ಈಗಾಗಲೇ ಪಂಚಾಯಿತಿ ಭವನ ನಿರ್ಮಾಣಕ್ಕೆ ಈಗಿನ ಸರ್ಕಾರದಿಂದ ಹತ್ತು ಲಕ್ಷ ರೂ.ಗಳ ಅನುದಾನ ಒದಗಿಸಲಾಗಿದ್ದು ಹೆಚ್ಚುವರಿ ಅನುದಾನ ನೀಡುವ ಭರವಸೆಯನ್ನು ನೀಡಿದರು. ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಭಾರ್ಗವ್ ಚೆರಿಯಮನೆ, ಬ್ಲಾಕ್ ಸಂಘಟನ ಕಾರ್ಯದರ್ಶಿ ಅಬ್ದುಲ್ ರಜಾಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತ, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಕೆ. ಯುಸೂಫ್ ಆಲಿ, ಬಿ.ಎ. ಉಷಾ ತಂಗಮ್ಮ, ಪ್ರಮುಖರಾದ ಚಂದನ್ ಬಲ್ಲಚಂಡ, ಮೋಹನ್ ವಿ.ಜಿ., ಹರಿಪ್ರಸಾದ್ ಕೋಚನ ಸೇರಿದಂತೆ ಇನ್ನಿತರರು ಹಾಜರಿದ್ದರು.