ಮಡಿಕೇರಿ, ಫೆ. ೫: ನಗರದ ಸುದರ್ಶನ ವೃತ್ತದ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ದಲಿತ ಸಮುದಾಯಕ್ಕೆ ಉಪಯೋಗ ವಾಗುವಂತೆ ಸಂಬAಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯಿಂದ ತಾ. ೧೦ರಂದು ಅಂಬೇಡ್ಕರ್ ಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಹೆಚ್.ಎಲ್. ದಿವಾಕರ್ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದರ್ಶನ ವೃತ್ತದಲ್ಲಿರುವ ಅಂಬೇಡ್ಕರ್ ಭವನವನ್ನು ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಹಾಗೂ ಇತರ ಕೆಲವು ವ್ಯಕ್ತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡು ದಲಿತ ಸಮುದಾಯದ ಉಪಯೋಗಕ್ಕೆ ನೀಡದೆ ಮದುವೆ, ಇನ್ನಿತರ ಸಮಾರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತಿದೆ. ಈ ಬಗ್ಗೆ ಸಮಾಜ ಕಲ್ಯಾಣ ಅಧಿಕಾರಿ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಅಂಬೇಡ್ಕರ್ ಭವನವನ್ನು ದಲಿತ ಸಮುದಾಯದ ಉಪಯೋಗಕ್ಕೆ ಬಳಸಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ತಾ. ೧೦ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಿತಿಯ ಉಪಾಧ್ಯಕ್ಷ ಹೆಚ್.ಜಿ. ಗೋವಿಂದಪ್ಪ ಮಾತನಾಡಿ, ಎಲ್ಲರ ನೆರವಿನಿಂದ, ಬಹಳಷ್ಟು ಜನರ ಶ್ರಮದಿಂದ ಅಂಬೇಡ್ಕರ್ ಭವನ ನಿರ್ಮಾಣವಾಗಿದೆ. ಆದರೆ, ಅದು ದಲಿತ ಸಮುದಾಯದ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿಲ್ಲ. ಆದ್ದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸುಮಾರು ೩೭ ವಿವಿಧ ಸಂಘಟನೆಗಳು ಚರ್ಚಿಸಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿಯ ಖಜಾಂಚಿ ಎನ್.ಎಂ. ದೇವರಾಜ್, ನಿರ್ದೇಶಕರುಗಳಾದ ದೀಪಕ್ ಪೊನ್ನಪ್ಪ, ಡಿ.ಜೆ. ಈರಪ್ಪ, ಹೆಚ್.ಎಲ್. ಕುಮಾರ್ ಉಪಸ್ಥಿತರಿದ್ದರು.