ವೀರಾಜಪೇಟೆ, ಫೆ. ೫: ಮಗ್ಗಲ ಗ್ರಾಮದ ಲಿಟಲ್ ಸ್ಕಾಲರ್ ಅಕಾಡೆಮಿ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು.
ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣದ ಬಳಿ ಜಾಗೃತಿ ಜಾಥಾ ನಡೆಯಿತು. ಆಯುರ್ವೇದ ವೈದ್ಯೆ ಡಾ. ಸುನೀತಾ ಮಾತನಾಡಿ, ಕ್ಯಾನ್ಸರ್ ರೋಗ ಸಾಮಾನ್ಯವಾಗಿ ಹರಡುವ ರೋಗ. ಅದಕ್ಕೆ ನೈಸರ್ಗಿಕ ಔಷಧಿಗಳಿಂದ ಗುಣಪಡಿಸುವ ಶಕ್ತಿ ಇವೆ ಎಂದು ಹೇಳಿದರು.
ವೈದ್ಯ ಬೋಪಣ್ಣ ಮಾತನಾಡಿ, ಮನುಷ್ಯನಿಗೆ ಸಣ್ಣಪುಟ್ಟ ನೋವುಗಳು ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆಯಬೇಕು. ಡಾ. ದಕ್ಷಿತ ಮಾತನಾಡಿ, ಕ್ಯಾನ್ಸರ್ ಎನ್ನುವ ಕಾಯಿಲೆಗೆ ಔಷಧಿಗಳು ಸಿಗುತ್ತವೆ. ಯಾವುದೇ ಕಾರಣಕ್ಕೂ ಭಯಪಡಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷೆ ಪೂಜಾ ರವೀಂದ್ರ ಹಾಗೂ ಶಿಕ್ಷಕರು ಹಾಗೂ ಲಿಟಲ್ ಸ್ಕಾಲರ್ ಶಾಲೆಯ ಮಕ್ಕಳು, ಸಿಬ್ಬಂದಿಗಳು ಭಾಗವಹಿಸಿದ್ದರು.