ಮಡಿಕೇರಿ, ಫೆ. ೪: ಮನುಷ್ಯನಿಗೆ ಆರೋಗ್ಯವೇ ಬಹುದೊಡ್ಡ ಸಂಪತ್ತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರ್ಕಾರಿ ಅಭಿಯೋಜನೆ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಮಾಹಿತಿ, ತಪಾಸಣೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಂಪತ್ತು ಎಂದರೆ ಕೇವಲ ಹಣ ಮಾತ್ರವಲ್ಲ; ಮನುಷ್ಯನ ಆರೋಗ್ಯ ಹಣಕ್ಕಿಂತಲೂ ಮಿಗಿಲಾದ ಸಂಪತ್ತು. ಆದ್ದರಿಂದ ಆರೋಗ್ಯ ಎಂಬ ಸಂಪತ್ತನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳ ಬೇಕೆಂದರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸಲಹೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ. ನಿರಂಜನ್ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ಕೆಲಸದಲ್ಲಿನ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯೋಗ, ಧ್ಯಾನ, ವ್ಯಾಯಾಮ ಇವುಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ಪಲ್ಲವಿ ನಾಯಕ್ ಮಾತನಾಡಿ, ಯಾವುದೇ ರೋಗಗಳು ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ರೋಗಗಳು ಬಾರದ ರೀತಿಯಲ್ಲಿ ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ. ಸೂರ್ಯೋದಯಕ್ಕೆ ಮುನ್ನ ಎದ್ದು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಶರೀರದ ಶಕ್ತಿಗನುಸಾರವಾದ ವ್ಯಾಯಾಮ ಒಳಿತು ಎಂದು ಮಾಹಿತಿ ನೀಡಿದರು.
ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವೈದ್ಯಾಧಿಕಾರಿ ಡಾ. ಪಿ.ಜಿ. ಅರುಣ್ ಮಾತನಾಡಿ, ಒತ್ತಡ ಮತ್ತು ಬದಲಾದ ಜೀವನ ಶೈಲಿಯಿಂದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಯೋಗ ಮತ್ತು ಆಹಾರದಲ್ಲಿನ ಬದಲಾವಣೆಗಳು ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಪ್ರಶಾಂತಿ, ೩ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಕೆ. ಬಸವರಾಜ್, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಎನ್. ಸುಬ್ರಮಣ್ಯ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಎನ್.ಬಿ. ಜಯಲಕ್ಷಿö್ಮ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಸಿ.ಎನ್. ಮುನಿರತ್ನಮ್ಮ, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಎನ್.ಎ. ನಾಗೇಶ್, ಸರ್ಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಿ. ಶೈಲಜಾ ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿಗಳಾದ ರಾಶಿ, ರಕ್ಷಿತಾ, ಧರಣಿ ಪ್ರಾರ್ಥಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿ, ವಂದಿಸಿದರು. ಡಾ. ಅರುಣ್, ಡಾ. ಪಲ್ಲವಿ ನಾಯಕ್, ಡಾ. ಸರಸ್ವತಿ ಆರೋಗ್ಯ ತಪಾಸಣೆ ನಡೆಸಿಕೊಟ್ಟರು.