ಕೋವರ್‌ಕೊಲ್ಲಿ ಇಂದ್ರೇಶ್
ಬೆಂಗಳೂರು, ಫೆ. ೪: ಜಗತ್ತಿನ ಕಾಫಿ ಬೆಳೆಯುವ ದೈತ್ಯ ದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಂತರರಾಷ್ಟಿçÃಯ ಮಾರುಕಟ್ಟೆಗೆ ಕಾಫಿಯ ಸರಬರಾಜಿನಲ್ಲಿ ತೀವ್ರ ಕೊರತೆ ಉಂಟಾಗಿದ್ದು ಇದು ಸಹಜವಾಗಿಯೇ ಕಾಫಿಯ ದರ ಏರಿಕೆಗೂ ಕಾರಣವಾಗಿದೆ.
ಮಂಗಳವಾರ ಕಾಫಿ ಬೆಳೆಗಾರರಿಗೆ ಶುಭ ಮಂಗಳವಾರವೇ ಆಗಿದೆ. ಕಳೆದ ೭ ದಿನಗಳ ಹಿಂದೆ ೨೪,೧೦೦ ರೂಪಾಯಿ ತಲುಪಿದ್ದ ಅರೇಬಿಕಾ ಪಾರ್ಚ್ ಮೆಂಟ್ ಕಾಫಿ ದರ ಇಂದು ಸಾರ್ವಕಾಲಿಕ ದಾಖಲೆ ಬೆಲೆ ಆಗಿರುವ ೨೬,೨೦೦ ರೂಪಾಯಿಗಳನ್ನು ತಲುಪಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮಿನುಗಿಸಿದೆ. ಈ ಬಾರಿಯ ದರ ಏರಿಕೆಯ ವಿಶೇಷವೆಂದರೆ ಸಾಮಾನ್ಯವಾಗಿ ಕಾಫಿ ದರವು ಕೊಯ್ಲು ಸಮಯದಲ್ಲಿ ಕೊಂಚ ಕುಸಿತ ಇರುತ್ತದೆ . ಕೊಯಿಲು ಮುಗಿದ ಮೂರು ನಾಲ್ಕು ತಿಂಗಳಿನಲ್ಲಿ ಅಲ್ಪ ಏರಿಕೆ ದಾಖಲಿಸುತ್ತದೆ. ಆದರೆ ಈ ಬಾರಿ ಕಾಫಿ ಕೊಯ್ಲು ಇನ್ನೂ ಪೂರ್ಣಗೊಳ್ಳುವ ಮೊದಲೇ ಬೆಲೆಗಳು ಜಿಗಿತ ದಾಖಲಿಸಿವೆ.
ಶುಕ್ರವಾರವಷ್ಟೇ ೫೦ ಕೆ.ಜಿ. ಚೀಲಕ್ಕೆ ೨೪ ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಮಾರಾಟವಾಗುತಿದ್ದ ಅರೇಬಿಕಾ ಪಾರ್ಚ್ಮೆಂಟ್ ಸೋಮವಾರ ಚೀಲಕ್ಕೆ ೨೫ ಸಾವಿರದ ಐದು ನೂರು ಹಾಗೂ ಮಂಗಳವಾರ ಮತ್ತೂ ಏಳು ನೂರು ರೂಪಾಯಿ ಬೆಲೆ ಏರಿಸಿಕೊಂಡು ೨೬,೨೦೦ ರೂಪಾಯಿ ತಲುಪಿದೆ. ಅಂದರೆ ಕಾಫಿ ದರ ಕೇವಲ ಮೂರೇ ದಿನದಲ್ಲಿ ಚೀಲಕ್ಕೆ ೧೫೦೦ ರೂಪಾಯಿ ನಷ್ಟು ಏರಿಕೆ ದಾಖಲಿಸಿದೆ. ಈ ದಿಢೀರ್ ದರ ಏರಿಕೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ಅಪರೂಪ ಆಗಿದ್ದು ಉದ್ಯಮದಲ್ಲಿ ತೀವ್ರ ಅಚ್ಚರಿಗೂ ಕಾರಣವಾಗಿದೆ.
ಟ್ರಂಪ್ ಕಟ್ಟು ನಿಟ್ಟಿನ ಕ್ರಮ
ಅಮೇರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಅಮೇರಿಕಾದ ಹಿತಾಸಕ್ತಿಗೆ ಅನುಗುಣವಾಗಿ ಕೈಗೊಂಡಿರುವ ಕೆಲವೊಂದು ಕ್ರಮಗಳ ಕಾರಣದಿಂದ ಡಾಲರ್ ಮೌಲ್ಯ ಏರಿಕೆ ದಾಖಲಿಸುತಿದ್ದು ರೂಪಾಯಿ ಮೌಲ್ಯ ಗಣನೀಯವಾಗಿ ಕುಸಿತ ಅನುಭವಿಸುತ್ತಿದೆ. ಅಲ್ಲದೆ ಇದೇ ಕಾರಣದಿಂದಾಗಿ ದೇಶದ ಷೇರು ಮಾರುಕಟ್ಟೆಯಲ್ಲೂ ಕಂಪನ ದಾಖಲಾಗಿದ್ದು ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ಆರು ತಿಂಗಳ ಕನಿಷ್ಟ ಮಟ್ಟಕ್ಕೆ ಕುಸಿದಿವೆ. ಆದರೆ ಮುಖ್ಯವಾಗಿ ಚಿನ್ನದ ಬೆಲೆಯಲ್ಲಿ ತೀವ್ರ ಹೆಚ್ಚಳ ಆಗುತಿದ್ದು ಇದೇ ರೀತಿ ಕಾಫಿ ದರವೂ ಏರಿಕೆ ದಾಖಲಿಸುತ್ತಿದೆ.
ಮಂಗಳವಾರ ಸೋಮವಾರಪೇಟೆಯಲ್ಲಿ ಕಾಫಿ ದರ ಅರೇಬಿಕಾ ಪಾರ್ಚ್ಮೆಂಟ್ ರೂ. ೨೬,೨೦೦ ರೂಪಾಯಿ ದಾಖಲಾಗಿದ್ದರೆ ಮೂಡಿಗೆರೆಯಲ್ಲಿ ೨೬,೦೦೦ ರೂಪಾಯಿ ದಾಖಲಾಗಿತ್ತು. ಅರೇಬಿಕಾ ಚೆರಿ ಕಾಫಿ ೫೦ ಕೆಜಿ ಚೀಲಕ್ಕೆ ೧೩,೫೦೦, ರೊಬಸ್ಟಾ ಚೆರಿ ೧೨,೫೦೦ ಮತ್ತು ರೊಬಸ್ಟಾ ಪಾರ್ಚ್ಮೆಂಟ್ ದರ ೨೨,೫೦೦ ರೂಪಾಯಿಗಳಿಗೆ ಏರಿಕೆ ಆಗಿದೆ. ಚಿಕ್ಕಮಗಳೂರು ಹಾಗೂ ಕೊಡಗಿನ ಕಾಪಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ದರ ವ್ಯತ್ಯಾಸ ಇರಲಿಲ್ಲ. ಮುಂದಿನ ತಿಂಗಳುಗಳಲ್ಲಿ ಕಾಫಿ ದರ ಹೆಚ್ಚಾಗಿ ೩೦ ಸಾವಿರ ತಲುಪುವ ಸಾದ್ಯತೆಯೂ ಇದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.
ಹೆಚ್ಚಿದ ಚಿಕೋರಿ ಬಳಕೆ
ಕಾಫಿ ದರ ಏರಿಕೆ ಬೆಳೆಗಾರರಿಗೆ ಹರುಷ ತಂದಿದ್ದರೂ ಕಾಫಿ ಬಳಕೆದಾರರಿಗೆ ಮಾತ್ರ ಬಾಯಿ ಕಹಿ ಆಗಿದೆ. ಈ ನಡುವೆ ಕಾಫಿಯ ರುಚಿಗಾಗಿ ಮಿಶ್ರಣ ಮಾಡುವ ಚಿಕೋರಿ ಬೇರಿನ ಬಳಕೆ ಹೆಚ್ಚಾಗಿದೆ ಎಂದು ಬೆಂಗಳೂರಿನ ವ್ಯಾಪಾರಿಯೊಬ್ಬರು ‘ಶಕ್ತಿ’ಗೆ ತಿಳಿಸಿದರು. ಕಾಫಿಯ ದರ ಹೆಚ್ಚಳವನ್ನು ಸರಿದೂಗಿಸಲು ಕಾಫಿಗೆ ಶೇ. ೨೦ ರಷ್ಟು ಚಿಕೋರಿ ಮಿಶ್ರಣ ಮಾಡುವ ಬದಲಿಗೆ ಶೇ. ೪೦ ರಿಂದ ೫೦ ರವರೆಗೆ ಚಿಕೋರಿ ಮಿಶ್ರಣ ಮಾಡಲಾಗುತ್ತಿದೆ ಎಂದು ವ್ಯಾಪಾರಿ ಮೂಲಗಳು ತಿಳಿಸಿವೆ. ರುಚಿಗಾಗಿ ನಿಗದಿತ ಪ್ರಮಾಣದ ಚಿಕೋರಿ ಬೆರೆಸಲು ಅನುಮತಿ ಇದೆಯಾದರೂ ಇದನ್ನು ಪೊಟ್ಟಣದ ಮೇಲೆ ಸ್ಪಷ್ಟವಾಗಿ ನಮೂದಿಸಬೇಕಿದೆ. ಆದರೆ ಹೆಚ್ಚಿನ ಪ್ರಮಾಣದ ಸಿಕೋರಿ ಮಿಶ್ರಣ ಕಲಬೆರಕೆ ಎನಿಸಿಕೊಳ್ಳುತ್ತದೆ. ಆದರೆ ಬೆಂಗಳೂರು, ಇತರ ನಗರ ಪ್ರದೇಶಗಳಲ್ಲಿ ವ್ಯಾಪಕ ಕಲಬೆರಕೆ ಮಾಡಿ ಕಾಫಿಯ ಸ್ವಾದ ಮತ್ತು ಗುಣಮಟ್ಟ ಕುಸಿಯುವಂತೆ ಮಾಡಲಾಗುತ್ತಿದೆ. ಇದರಿಂದಾಗಿ ಕಾಫಿಯ ನೂತನ ಗ್ರಾಹಕರು ರುಚಿಯಾಗಿಲ್ಲ ಎಂದು ಇತರ ಪಾನೀಯದತ್ತ ಮುಖ ಮಾಡುವ ಸಾದ್ಯತೆ ಇದೆ ಎಂದು ಕಾಫಿ ಉದ್ಯಮಿಯೊಬ್ಬರು ತಿಳಿಸಿದರು. ಈಗ ಚಿಕೋರಿ ಬೇರಿನ ದರ ಕಿಲೋಗೆ ೪೦-೫೦ ರೂಪಾಯಿ ಇದೆ.
ಕೊಡಗಿನ ರಿಯಲ್ ಎಸ್ಟೇಟ್ ಮೇಲೆ ಪ್ರಭಾವ: ಕೊಡಗಿನಲ್ಲಿ ಸಾವಿರಾರು ಎಕರೆ ತೋಟಗಳು ಮಾರಾಟಕ್ಕಿವೆ.
(ಮೊದಲ ಪುಟದಿಂದ) ಯುವ ಜನಾಂಗ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ವಲಸೆ ಹೋಗಿ ಅಲ್ಲಿಯೇ ಸೈಟು ಮನೆ ಖರೀದಿಸಿ ಸೆಟಲ್ ಆಗುತ್ತಿರುವುದರಿಂದ ಮತ್ತು ಕೊಡಗಿಗೆ ಹೋಗಲು ಐದರಿಂದ ಆರು ಘಂಟೆ ಪ್ರಯಾಣದ ಅವಧಿ ಇರುವುದರಿಂದ ತೋಟಗಳನ್ನು ನೋಡಿಕೊಳ್ಳಲು ಕಾರ್ಮಿಕರ ಅಭಾವವೂ ಇರುವುದರಿಂದ ನೂರಾರು ಬೆಳೆಗಾರರು ತೋಟಗಳ ಮಾರಾಟಕ್ಕೆ ಮುಂದಾಗುತಿದ್ದಾರೆ. ಇಲ್ಲಿ ಮಾರಾಟ ಮಾಡಿ ಬೆಂಗಳೂರಿನಲ್ಲಿ ಆಸ್ತಿ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೊಡಗಿನ ತೋಟಗಳನ್ನು ಖರೀದಿಸುವವರಲ್ಲಿ ಹೊರಗಿನವರೇ ಹೆಚ್ಚಾಗಿದ್ದಾರೆ. ಈ ರೀತಿ ಖರೀದಿಸುವವರು ಹೋಂ ಸ್ಟೇ ನಡೆಸುವ ಆಶಯ ಹೊಂದಿರುವುದರಿAದ ಭೂಮಿ ಬೆಲೆಯೂ ಏರಿಕೆ ಆಗಿದೆ. ಇದೀಗ ಕಾಫಿ ದರ ಏರಿಕೆ ಹಿನ್ನೆಲೆ ತೋಟಗಳ ದರವೂ ಹೆಚ್ಚಾಗಿದೆ. ಮೂರು ತಿಂಗಳ ಹಿಂದೆ ಎಕರೆಗೆ ರೂ ೩೦ ಲಕ್ಷಕ್ಕೆ ಮಾರಾಟಕಿಟ್ಟಿದ್ದ ತೋಟ ಮಾಲೀಕರು ಇದೀಗ ಕಾಫಿ ದರ ಹೆಚ್ಚಳದಿಂದ ೩೫ ಲಕ್ಷ ಕೇಳುತಿದ್ದಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತಿಳಿಸಿದರು. ಒಟ್ಟಿನಲ್ಲಿ ಕಾಫಿ ದರ ಏರಿಕೆ ಕೊಡಗಿನಲ್ಲಿ ವ್ಯಾಪಕ ಸಂಚಲನಕ್ಕೂ ಕಾರಣವಾಗಿದೆ.