ಮಡಿಕೇರಿ, ಜ. ೨೮: ಹೃದಯಾಘಾತ ಸಂಭವಿಸಿ ವ್ಯಕ್ತಿಯೋರ್ವ ಕಾರಿನಲ್ಲಿಯೇ ಕೊನೆಯುಸಿರೆಳೆದ ಘಟನೆ ನಗರದ ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೂಲತಃ ಹಚ್ಚಿನಾಡು ನಿವಾಸಿ, ಕರ್ಣಂಗೇರಿಯಲ್ಲಿ ನೆಲೆಸಿದ್ದ ತಂಬುಕುತ್ತಿರ ತಿಮ್ಮಯ್ಯ (ಗಾಂಧಿ-೪೨) ಮೃತ ವ್ಯಕ್ತಿ.
ಅವಿವಾಹಿತರಾಗಿದ್ದ ತಿಮ್ಮಯ್ಯ ಮಾಂದಲಪಟ್ಟಿಯ ಲ್ಲಿರುವ ತೋಟಕ್ಕೆ ತೆರಳಿ ೨-೩ ದಿನಗಳು ಕಳೆದು ಮನೆಗೆ ಬರುತ್ತಿದ್ದರು. ತಾ. ೨೫ ರಂದು ಮನೆಯಿಂದ ತನ್ನ ಮಾರುತಿ ೮೦೦ ಕಾರಿನಲ್ಲಿ ತೆರಳಿದ ತಿಮ್ಮಯ್ಯ ಮನೆಗೆ ಬಂದಿರುವುದಿಲ್ಲ. ಸಹಜವಾಗಿ ತೋಟಕ್ಕೆ ತೆರಳಿರಬಹುದೆಂದು ಮನೆಯವರು ಭಾವಿಸಿದ್ದರು. ಆದರೆ, ಇಂದು ಬೆಳಿಗ್ಗೆ ಖಾಸಗಿ ಬಸ್ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಿಲುಗಡೆಯಾಗಿದ್ದ ಕಾರಿನಲ್ಲಿ ತಿಮ್ಮಯ್ಯ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ಮುಚ್ಚಿದ್ದ ಕಾರಿನ ಬಾಗಿಲನ್ನು ತೆಗೆದು ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಕ್ರಮಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ದೃಢಪಡಿಸಿದ್ದಾರೆ.
ತಿಮ್ಮಯ್ಯ ವಿಪರೀತವಾಗಿ ಮದ್ಯ ಸೇವಿಸುತ್ತಿದ್ದು, ಕಾರನ್ನು ನಿಲ್ಲಿಸಿಕೊಂಡು ಮದ್ಯಪಾನ ಮಾಡಿ ಸರಿಯಾಗಿ ಊಟ ಸೇವಿಸದ ಹಿನ್ನೆಲೆ ಈ ಘಟನೆ ನಡೆದಿರಬಹುದು ಎಂದು ತಂದೆ ಟಿ.ಪಿ. ಮಾದಪ್ಪ ದೂರು ನೀಡಿದ್ದು, ಅದರನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ತಿಮ್ಮಯ್ಯ ತಂದೆ, ತಾಯಿ, ಇಬ್ಬರು ಸಹೋದರಿಯನ್ನು ಅಗಲಿದ್ದು, ತಾ. ೨೯ ರಂದು (ಇಂದು) ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.