ಮಡಿಕೇರಿ, ಜ. ೨೮: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರ ಕಾರ್ಯಕ್ರಮದ ಬಗ್ಗೆ ಕಾರ್ಯಕರ್ತರ ಗಮನಕ್ಕೆ ತರಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.
ಸಂಸದರ ಕಾರ್ಯಕ್ರಮದ ಕುರಿತು ಸ್ಥಳೀಯ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಮಾಹಿತಿ ಸಿಗುತ್ತಿಲ್ಲ ಎಂಬ ಅಪಸ್ವರದ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಅವರು, ಜಿಲ್ಲಾ ಬಿಜೆಪಿಯ ಗಮನಕ್ಕೆ ಬಾರದೆ ಲೋಕಸಭಾ ಸದಸ್ಯರು ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ನಡೆಸುವುದಿಲ್ಲ. ಲೋಕಸಭಾ ಚುನಾವಣೆಯ ಗೆಲುವಿನ ನಂತರ ಉತ್ಸಾಹದಿಂದ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಯದುವೀರ್ ಅವರು ಜಿಲ್ಲೆಯಲ್ಲಿ ಭಾಗವಹಿಸುವ ಕಾರ್ಯಕ್ರಮಗಳ ಬಗ್ಗೆ ಪ್ರವಾಸದ ಪಟ್ಟಿಯನ್ನು ಅವರ ಆಪ್ತ ಸಹಾಯಕರ ಮೂಲಕ ತಲುಪಿಸುತ್ತಿದ್ದಾರೆ. ಅದರಂತೆ ತಾ. ೨೭ರ ಕಾರ್ಯಕ್ರಮದ ವಿವರವನ್ನು ಸಹ ಅವರ ಆಪ್ತ ಸಹಾಯಕರು ನನ್ನ ಗಮನಕ್ಕೆ ತಂದಿರುತ್ತಾರೆ. ಇದನ್ನು ನಾನು ಮಂಡಲದವರಿಗೂ ಕಳುಹಿಸಿದ್ದೇನೆ. ಜಿಲ್ಲಾ ಬಿಜೆಪಿಯಲ್ಲಿ ಈ ರೀತಿಯ ಯಾವುದೇ ಗೊಂದಲಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸದರು ಜಿಲ್ಲೆಯ ಅನೇಕ ಕಡೆ ಇಲ್ಲಿಯ ತನಕ ಪ್ರವಾಸ ಕೈಗೊಂಡಿದ್ದು, ಬಾಕಿ ಉಳಿದಿರುವ ಕಡೆಗಳಿಗೆ ಸದ್ಯದಲ್ಲಿಯೇ ಪಕ್ಷದ ಜಿಲ್ಲಾ ಪ್ರಮುಖರು ಹಾಗೂ ಆಯಾಭಾಗದ ಕಾರ್ಯಕರ್ತರ ಅಪೇಕ್ಷೆಯಂತೆ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.