ಮಡಿಕೇರಿ, ಜ. ೨೮: ಕೊಡವ ಮತ್ತು ಅರೆಭಾಷೆ ಗೌಡ ಜನಾಂಗದ ನಡುವೆ ಬೇರೆ ಬೇರೆ ಕಾರಣಕ್ಕೆ ಸ್ವಲ್ಪಮಟ್ಟಿನ ಹಗೆತನ, ಪೈಪೋಟಿಯಿದೆ. ೧೯೯೧ರಲ್ಲಿ ಕೊಡಗು ಏಕೀಕರಣ ರಂಗ ಈ ಪರಿಪಾಠಕ್ಕೆ ಪೂರ್ಣ ವಿರಾಮ ಹಾಕುವ ಪ್ರಯತ್ನ ನಡೆಸಿ ಸಾಕಷ್ಟು ಯಶಸ್ಸು ಕಂಡಿತ್ತು. ಆದರೆ ರಾಜಕೀಯ ಪಕ್ಷಗಳು ಮತ್ತು ಕೆಲ ಜನನಾಯಕರು ಜಾತಿ ಜಾತಿ ನಡುವಿನ ಕಂದಕವನ್ನು ರಾಜಕೀಯ ಕಾರಣಕ್ಕೆ ಜೀವಂತವಾಗಿಟ್ಟಿದ್ದಾರೆ ಎಂದು ಕೊಡವ ಟ್ರಸ್ಟ್ ಅಧ್ಯಕ್ಷ ಎ.ಎ. ತಮ್ಮು ಪೂವಯ್ಯ, ಮಂದಪAಡ ಕೆ. ಅಪ್ಪಚ್ಚು ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರುಗಳು ಕಟ್ಟೆಮಾಡುವಿನ ದೇವಾಲಯದ ವಾರ್ಷಿಕ ಹಬ್ಬದ ಸಮಯದಲ್ಲಿ ನಡೆದ ಅಹಿತಕರ ಘಟನೆಯನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಕೊಡವ ಮತ್ತು ಅರೆಭಾಷೆ ಗೌಡ ಜನಾಂಗದ ಸಂಘ ಸಂಸ್ಥೆಗಳು ವಿಫಲವಾಗಿದ್ದೇ ತಾ. ೨೭ ರಂದು ಅರ್ಚಕರ ಮೇಲಿನ ಹಲ್ಲೆ ನಡೆದ ಘಟನೆಗೆ ಪ್ರಮುಖ ಕಾರಣವಾಗಿದೆ.

ಈ ಹಿಂದೆ ಕಟ್ಟೆಮಾಡುವಿನ ದೇವಸ್ಥಾನದಲ್ಲಿ ಕೊಡವ ಜನಾಂಗದವರ ಮೇಲೆ ನಡೆದ ಹಲ್ಲೆ ಪ್ರಕರಣ ಹಾಗೂ ಮೂರ್ನಾಡುವಿನಲ್ಲಿ ಕೆಲ ಯುವಕರಿಂದ ಅರ್ಚಕ ಶ್ರೀ ವಿಘ್ನೇಶ್ ಭಟ್ ಮೇಲೆ ನಡೆದ ಹಲ್ಲೆಯನ್ನು ಕೊಡವ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ.

ಈ ಹಲ್ಲೆ ಪ್ರಕರಣವು ಕೆಲವು ವ್ಯಕ್ತಿಗಳ ನಡುವಿನ ಘರ್ಷಣೆಯೆ ಹೊರತು ಜನಾಂಗಗಳ ನಡುವಿನ ಘರ್ಷಣೆಯಾಗಿರುವುದಿಲ್ಲ, ಈ ಘಟನೆಯಲ್ಲಿ ಜನಾಂಗಗಳ ನಡುವಿನ ಘರ್ಷಣೆಯೆಂದು ಕೊಡಗಿನ ಜನತೆ ಬಿಂಬಿಸಬಾರದಾಗಿ ಮನವಿ ಮಾಡಿದ್ದಾರೆ.

ಅರ್ಚಕ ವಿಘ್ನೇಶ್ ಭಟ್ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇವೆ. ಕಟ್ಟೆಮಾಡು ದೇವಾಲಯದಲ್ಲಿ ವಾರ್ಷಿಕ ಹಬ್ಬದ ಸಮಯದಲ್ಲಿ ಕೊಡವ ಜನಾಂಗದ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳ ಮೇಲೆ ಇದುವರೆಗೂ ಕಾನೂನು ಕ್ರಮ ಕೈಗೊಂಡಿಲ್ಲ ಎಂಬ ಅಂಶವನ್ನು ನೆನಪಿಸುತ್ತಾ ಪೊಲೀಸ್ ಇಲಾಖೆ ನಿರ್ಲಕ್ಷö್ಯ ತೋರಿದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗಬಹುದು ಎಂದಿದ್ದಾರೆ.

ಅರ್ಚಕ ವಿಘ್ನೇಶ್ ಭಟ್ ಮೇಲಿನ ಹಲ್ಲೆ ನಡೆಸಿದ ಆರೋಪಿಗಳನ್ನು ಪಕ್ಷದಿಂದ ಅಮಾನತು ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ತೋಳ್ಬಲಕ್ಕೆ ರಾಜಕಾರಣದಲ್ಲಿ ಅವಕಾಶವಿಲ್ಲ ಎಂಬ ಸಂದೇಶ ರವಾನಿಸಿದೆ. ಆದರೆ ತಮ್ಮ ಪಕ್ಷದ ಪ್ರಮುಖ ಪದಾಧಿಕಾರಿಯ ಜಾತಿ ನೆಲೆಗಟ್ಟಿನ ವರ್ತನೆಯನ್ನು ಸಹಿಸಿಕೊಳ್ಳುವ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಮೂಲಕ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ತನ್ನ ಇಬ್ಬಂದಿತನದಿAದ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಇಂದಿನ ಸೂಕ್ಷ್ಮ ಸನ್ನಿವೇಶದಲ್ಲಿ ಎಲ್ಲಾ ಜನಾಂಗದ ನಾಯಕರು, ರಾಜಕೀಯ ನಾಯಕರುಗಳು, ಸಮುದಾಯಗಳ ಪ್ರಜ್ಞಾವಂತ ಹಿರಿಯರು ಈ ಬಗ್ಗೆ ಚರ್ಚಿಸಿ, ಈ ರೀತಿಯ ಸಂಘರ್ಷಕ್ಕೆ ವಿರಾಮ ಕೊಡುವುದು ಒಳ್ಳೆಯದು. ಎಂದು ಕರೆ ನೀಡಿದ್ದಾರೆ.