ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಜ. ೨೮: ಮಂಜಿನ ನಗರಿ ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ದಸರಾ ಜನೋತ್ಸವ ಜನಮನ ಸೆಳೆದು ಯಶಸ್ವಿಯಾಗಿ ಮುಕ್ತಾಯ ಕಂಡು ೩ ತಿಂಗಳು ಕಳೆದ ಬಳಿಕ ಅನುದಾನ ಜಿಲ್ಲಾಧಿಕಾರಿ ಖಾತೆಗೆ ಜಮೆಗೊಂಡಿದೆ. ಕೆಲವೇ ದಿನಗಳಲ್ಲಿ ಹಣ ಸಂದಾಯ ಕಾರ್ಯ ನಡೆಯಲಿದೆ.

ಅಕ್ಟೋಬರ್ ತಿಂಗಳಿನಲ್ಲಿ ೯ ದಿನಗಳ ಕಾಲ ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ದಸರಾ ಜನೋತ್ಸವ ರಂಗು ಪಡೆದುಕೊಂಡು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸೆಳೆದಿತ್ತು. ಕೊನೆ ದಿನ ಎರಡು ಕಡೆಗಳಲ್ಲಿ ದಶಮಂಟಪಗಳ ಶೋಭಾಯಾತ್ರೆ ದಸರಾದ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿ ತೆರೆ ಕಂಡಿತ್ತು. ಸಹಸ್ರ ಸಂಖ್ಯೆಯಲ್ಲಿ ಜನರು ಸೇರಿ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.

ದಸರಾಕ್ಕೂ ಮುನ್ನವೇ ಸರಕಾರ ಐತಿಹಾಸಿಕ ಮಡಿಕೇರಿ ದಸರಾ ಆಚರಣೆಗೆ ರೂ. ೧.೫೦ ಕೋಟಿ ಹಾಗೂ ಗೋಣಿಕೊಪ್ಪ ದಸರಾಕ್ಕೆ ರೂ. ೭೫ ಲಕ್ಷ ಹಣವನ್ನು ಘೋಷಿಸಿತ್ತು. ಆದರೆ, ಹಣ ಖಾತೆಗೆ ಜಮೆಯಾಗಿರಲಿಲ್ಲ. ಅನುದಾನ ಕೈ ಸೇರದೆ ಸಮಿತಿಗಳು ಅತಂತ್ರಗೊAಡಿದ್ದವು. ಈ ಸಂದಿಗ್ದತೆಯ ನಡುವೆಯೂ ದಸರಾ ಸಮಿತಿಗಳು ಕಾರ್ಯಯೋಜನೆ ರೂಪಿಸಿ ದಸರಾ ಆಚರಣೆಯನ್ನು ವ್ಯವಸ್ಥಿತವಾಗಿ ನಡೆಸಿದ್ದವು. ನಗರಸಭೆ ಅಧ್ಯಕ್ಷ ಸ್ಥಾನ ಖಾಲಿಯಿದ್ದ ಹಿನ್ನೆಲೆ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾಗಿ ಈ ಬಾರಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕಾರ್ಯನಿರ್ವಹಿಸಿ ವಿನೂತನ ಕಾರ್ಯಕ್ರಮ ನಡೆಸಿ ಸೈ ಎನಿಸಿಕೊಂಡಿದ್ದರು. ಆದರೆ, ಅನುದಾನ ವಿಳಂಬದ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದ್ದವು.

ಕೆಲ ಸಮಯದ ಬಳಿಕ ಮೈಸೂರು ದಸರಾ ಮತ್ತು ರಾಜ್ಯೋತ್ಸವ ಪ್ರಶಸ್ತಿಯಡಿಯಲ್ಲಿ ಲಭ್ಯವಿದ್ದ ರೂ ೫.೮೯ ಕೋಟಿ ಹಾಗೂ ಹೆಚ್ಚುವರಿಯಾಗಿ ಒದಗಿಸಿದ್ದ ರೂ. ೧೯.೧೧ ಕೋಟಿ ಸೇರಿದಂತೆ ಒಟ್ಟು ರೂ. ೨೫ ಕೋಟಿ ಹಣವನ್ನು ಮೈಸೂರು ದಸರಾ ಆಚರಣೆ ವೆಚ್ಚಗಳಿಗಾಗಿ ಮೈಸೂರು ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಿರುವ ಅನುದಾನ ಮಿತಿಯಲ್ಲಿಯೇ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾಕ್ಕೆ ನಿಗದಿಗೊಂಡಿದ್ದ ಅನುದಾನವನ್ನು ಮೈಸೂರು ಜಿಲ್ಲಾಧಿಕಾರಿಯಿಂದ ಕೊಡಗು ಜಿಲ್ಲಾಧಿಕಾರಿಗೆ ವರ್ಗಾಯಿಸಲು ಸರಕಾರ ಮಂಜೂರಾತಿ ನೀಡಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅನುದಾನ ಖಾತೆಗೆ ವರ್ಗಾವಣೆಗೊಳ್ಳದೆ ವಿಳಂಬವಾಗಿತ್ತು. ಕೆಲ ದಿನಗಳ ಹಿಂದೆ ಸರಕಾರದಿಂದ ಹಣ ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆಗೊಂಡಿದೆ.

ಹಣವಿಲ್ಲದೆ ಎದುರಾಗಿದ್ದ ಸಮಸ್ಯೆ

ಅನುದಾನ ಕೈ ಸೇರದ ಪರಿಣಾಮ ಸಮಿತಿಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾದ ಸ್ಥಿತಿ ಸೃಷ್ಟಿಯಾಗಿದ್ದು, ಇಂದಿಗೂ ಮುಂದುವರೆದಿದೆ. ಹಲವು ಕಲಾವಿದರಿಗೆ ಸಂಭಾವನೆ ಸಿಗದೆ ಸಾಂಸ್ಕೃತಿಯ ಸಮಿತಿಯ ದುಂಬಾಲು ಬಿದ್ದಿದ್ದಾರೆ. ಇದರಿಂದ ಸದಸ್ಯರು ಪೇಚಿಗೆ ಸಿಲುಕಿ ಏನು ಮಾಡುವುದು ತಿಳಿಯದೆ ಅತಂತ್ರರಾಗಿದ್ದಾರೆ. ಹಣ ಬಿಡುಗಡೆಯಿಂದ ಸಮಿತಿಗಳು ನಿರಾಳವಾಗಿವೆ.

ಮಹಿಳಾ ದಸರಾ, ಯುವ ದಸರಾ, ಕ್ರೀಡಾ, ಕವಿಗೋಷ್ಠಿ ಸೇರಿದಂತೆ ಇನ್ನಿತರ ಸಮಿತಿಗಳು ಮಾಡಿದ ಖರ್ಚು, ಕೊಡಬೇಕಾದ ಹಣಗಳನ್ನು ನೀಡಲಾಗದೆ ಪರದಾಡುತ್ತಿತ್ತು. ಇದರೊಂದಿಗೆ ರಾಜ್ಯ ಸರಕಾರಿ ಸಂಸ್ಥೆಯಾದ ಎಂ.ಸಿ.ಎ. (ಮಾರ್ಕೆಟಿಂಗ್ ಕಮ್ಯುನಿಕೇಷನ್ & ಅಡ್ರ‍್ಟೆöÊಸ್) ಮೂಲಕ ವೇದಿಕೆ ನಿರ್ಮಾಣ ಕಾರ್ಯ ನಡೆದಿದ್ದು, ವೇದಿಕೆಗೆ ವ್ಯಯಿಸಿದ ಖರ್ಚು ನಿರೀಕ್ಷೆಗೂ ಮೀರಿ ಹೆಚ್ಚಾದ ಮಾಹಿತಿಗಳಿವೆ. ಅವರಿಗೂ ಹಣ ಸಂದಾಯ ಬಾಕಿ ಉಳಿದಿದೆ. ಇದರೊಂದಿಗೆ ಊಟ, ದಶಮಂಟಪ ಸಮಿತಿಗೆ, ಉಪಸಮಿತಿಗಳಿಗೆ, ಮುದ್ರಣಕ್ಕೆ ಸೇರಿದಂತೆ ಹಲವರಿಗೆ ಹಣ ನೀಡುವುದು ಬಾಕಿ ಉಳಿದುಕೊಂಡಿದೆ.

ಮಡಿಕೇರಿ ದಸರಾಕ್ಕೆ ಸರಕಾರ ನೀಡಿದ ಮೊತ್ತಕ್ಕಿಂತ ಹೆಚ್ಚಿನ ಖರ್ಚಾಗಿರುವ ಕುರಿತು ಮಾಹಿತಿಯಿದ್ದು, ಇದನ್ನು ಪ್ರಾಯೋಜಕರಿಂದ ಬಂದ ಹಣದಿಂದ ಸರಿದೂಗಿಸಲಾಗುತ್ತದೆ. ಇದರೊಂದಿಗೆ ನಾಡಿನ ಖ್ಯಾತ ಕಲಾವಿದರಿಗೆ ಪ್ರಾಯೋಜಕತ್ವ ಹಣದಿಂದ ಸಂಭಾವನೆ ಸಂದಾಯ ಮಾಡಲಾಗಿದೆ ಎಂಬ ಮಾಹಿತಿಗಳಿವೆ.