ಸಿಎನ್‌ಸಿ

ಮಡಿಕೇರಿ: ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕರಾದ ವಿಘ್ನೇಶ್ ಭಟ್ ಅವರ ಮೇಲೆ ನಿನ್ನೆ ನಡೆದ ಹಲ್ಲೆಯನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಖಂಡಿಸುವುದಾಗಿ ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿ.ಎನ್.ಸಿ ಸಂಘಟನೆಯು ಕೊಡವ ಜನಾಂಗಕ್ಕೆ ದೊರಕಬೇಕಿರುವ ಹಲವಾರು ಬೇಡಿಕೆಗಳ ಈಡೇರಿಕೆಗೆ ಹಲವಾರು ವರ್ಷಗಳಿಂದ ಶಾಂತಿಯುತವಾಗಿಯೇ ಹೋರಾಟ ನಡೆಸುತ್ತಿದೆ. ಅಹಿಂಸೆ ಹಾಗೂ ಶಾಂತಿಯುತ ಹೋರಾಟವೇ ಸಿ.ಎನ್.ಸಿ ಸಂಘಟನೆಯ ಕ್ರಮ ಎಂದಿರುವ ಅವರು, ಕಳೆದ ತಿಂಗಳ ೨೭ ರಂದು ಕೊಡವ ಜನಾಂಗದ ಮಹಿಳೆಯರಿಗೆ ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ಆದ ಅವಮಾನ ಹಾಗೂ ಇದೀಗ ನಿನ್ನೆ ಅರ್ಚಕರ ಮೇಲೆ ನಡೆದ ಹಲ್ಲೆ ಖಂಡನೀಯ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು ಹಾಗೂ ಜಿಲ್ಲೆಯಲ್ಲಿ ಎಲ್ಲಾ ಜನಾಂಗದವರು ಶಾಂತಿಯುತವಾಗಿ ಇರಬಲ್ಲ ವಾತಾವರಣ ಸೃಷ್ಟಿಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕುಶಾಲನಗರ ಗೌಡ ಯುವಕ ಸಂಘ

ಕಟ್ಟೆಮಾಡಿನ ಶ್ರೀ ಮೃತ್ಯುಂಜಯ ಕ್ಷೇತ್ರದ ಮುಖ್ಯ ಅರ್ಚಕರ ಮೇಲೆ ನಡೆದಿರುವ ಹಲ್ಲೆ ಆಘಾತಕಾರಿಯಾಗಿದ್ದು ಖಂಡನೀಯ ಎಂದು ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದ್ದಾರೆ. ತಕ್ಷಣ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ

ಮಡಿಕೇರಿ: ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಅರ್ಚಕರಾದ ವಿಘ್ನೇಶ್ ಭಟ್ ಅವರ ಮೇಲಿನ ಹಲ್ಲೆಯನ್ನು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘವು (ಕೈಕೇರಿ-ಗೋಣಿಕೊಪ್ಪ) ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತಮ ಜೀವನ ಸಂಘ

ಚೆಯ್ಯAಡಾಣೆ: ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಅರ್ಚಕರಾದ ವಿಘ್ನೇಶ್ ಭಟ್ ಹಾಗೂ ಅವರ ತಾಯಿ ಗೀತಾ ಅವರ ಮೇಲೆ ನಡೆದ ಹಲ್ಲೆಗೆ ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಂಘ ಖಂಡನೆ ವ್ಯಕ್ತಪಡಿಸಿದೆ. ಇನ್ನು ಮುಂದಕ್ಕೆ ಅರ್ಚಕರಿಗೆ ಯಾವುದೇ ರೀತಿಯ ಕಿರುಕುಳ ಆಗದಂತೆ ಹಾಗೂ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಒತ್ತಾಯಿಸಿದ್ದಾರೆ.

ಕೊಡಗು ಗೌಡ ಸಮಾಜಗಳ ಒಕ್ಕೂಟ

ಮಡಿಕೇರಿ: ಕಟ್ಟೆಮಾಡು ಗ್ರಾಮದಲ್ಲಿರುವ ಮಹಾ ಮೃತ್ಯುಂಜಯ ದೇವಸ್ಥಾನದ ಬೈಲಾದಲ್ಲಿಯ ಕೆಲವು ಅಂಶಗಳ ಅನುಷ್ಠಾನ ವಿಷಯದಲ್ಲಿ ಜಿಲ್ಲೆಯ ಎರಡು ಪ್ರಮುಖ ಜನಾಂಗಗಳ ಮಧ್ಯೆ ಉದ್ಭವಿಸಿರುವ ವಿವಾದ ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪ್ರಯತ್ನದಲ್ಲಿರುವ ಈ ಸಂದರ್ಭದಲ್ಲಿ ಸದ್ರಿ ದೇವಸ್ಥಾನದ ಅರ್ಚಕ ಹಾಗೂ ಅವರ ಕುಟುಂಬದ ಮೇಲೆ ನಡೆಸಿದ ದೈಹಿಕ ಹಲ್ಲೆ ಖಂಡನೀಯ.

ಜಿಲ್ಲೆಯಲ್ಲಿ ಅಶಾಂತಿ ಕಿಚ್ಚಿಗೆ ತುಪ್ಪವನ್ನು ಸುರಿಯುವಂತೆ ನಡೆಸಿದ ಈ ಹಲ್ಲೆಯ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ ಕಾನೂನಿನ ಕ್ರಮ ಕೈ ಗೊಳ್ಳುವಂತೆ ಕೊಡಗು ಗೌಡ ಸಮಾಜಗಳ ಒಕ್ಕೂಟ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ. ಈ ಬಗ್ಗೆ ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸೋಮವಾರಪೇಟೆ ಬ್ರಾಹ್ಮಣ ಸಮಾಜ ಖಂಡನೆ

ಸೋಮವಾರಪೇಟೆ: ಅರ್ಚಕರಾದ ವಿಘ್ನೇಶ್ ಭಟ್ ಅವರ ಮೇಲಿನ ಹಲ್ಲೆ ಖಂಡನೀಯವಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಸೋಮವಾರಪೇಟೆ ಬ್ರಾಹ್ಮಣ ಸಮಾಜ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಾಜದ ಉಪಾಧ್ಯಕ್ಷ ಎಸ್.ಆರ್. ಸೋಮೇಶ್, ಅರ್ಚಕರ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ ಕೃತ್ಯವಾಗಿದೆ ಎಂದು ಖಂಡಿಸಿದ್ದಾರೆ.

ಈಗಾಗಲೆ ಸಂಖ್ಯೆಯಲ್ಲಿ ಕಡಿಮೆಯಿರುವ ಬ್ರಾಹ್ಮಣ ವರ್ಗದ ರಕ್ಷಣೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರ ಸಹಕಾರದಿಂದ ಜಿಲ್ಲಾಡಳಿತ ಭವನದ ಮುಂಭಾಗ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀಕಾಂತ್, ನಿರ್ದೇಶಕ ಮಧುಸೂದನ್ ಇದ್ದರು.