ಮಡಿಕೇರಿ, ಜ. ೨೮: ವೃದ್ಧೆಯನ್ನು ಕೊಲೆಗೈದು, ಮನೆಯಲ್ಲಿದ್ದ ನಗದು, ಚಿನ್ನಾಭರಣ ದರೋಡೆÀ ಮಾಡಿದ್ದ ಆರೋಪಿಗೆ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ಘೋಷಿಸಿದೆ.

ಮೂಲತಃ ಮೂಡಬಿದಿರೆಯ ಹೊಸಬೆಟ್ಟು ಗ್ರಾಮದ ನಿವಾಸಿ, ಗಾಳಿಬೀಡು ಸಮೀಪದ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಪೂಜಾರಿ ಶಿಕ್ಷೆಗೊಳಗಾದ ಆರೋಪಿ.

ಅನಿಲ್ ಕೆಲಸ ಮಾಡುತ್ತಿದ್ದ ರೆಸಾರ್ಟ್ ಸಮೀಪದ ಕಾಫಿತೋಟ ಮಧ್ಯೆಯ ಮನೆಯಲ್ಲಿ ಲಲಿತಾ (೭೪) ಏಕಾಂಗಿಯಾಗಿ ನೆಲೆಸಿರುವುದನ್ನು ಗಮನಿಸುತ್ತಿದ್ದ ಅನಿಲ್ ತಾನು ಮಾಡಿದ ಸಾಲವನ್ನು ತೀರಿಸುವ ಉದ್ದೇಶದಿಂದ ಕೃತ್ಯಕ್ಕೆ ಮುಂದಾಗಿದ್ದಾನೆ.

ತಾ. ೨೨-೦೨-೨೦೨೧ ರಂದು ತನ್ನ ಬೈಕ್‌ನಲ್ಲಿ ಲಲಿತಾ ಮನೆ ಬಳಿ ತೆರಳಿ ಹಿಂಬದಿಯ ಶೆಡ್‌ನಲ್ಲಿ ಅವಿತು ಕುಳಿತು ಬೆಳಿಗ್ಗೆ ೫.೩೦ಕ್ಕೆ ನಿದ್ರೆಯಿಂದ ಎದ್ದು ಬಂದ ಲಲಿತಾ ಒಲೆಗೆ ಬೆಂಕಿ ಹಾಕುತ್ತಿದ್ದ ವೇಳೆ ಕಬ್ಬಿಣದ ಆಯುಧದಿಂದ ಬಲವಾಗಿ ಹಲ್ಲೆಗೈದಿದ್ದಾನೆ. ಪರಿಣಾಮ ತಲೆಗೆ ಗಂಭೀರ ಪೆಟ್ಟಾದ ಹಿನ್ನೆಲೆ ಲಲಿತಾ ಸಾವಿಗೀಡಾಗಿದ್ದಾರೆ. ನಂತರ ತೆರೆದಿದ್ದ ಹಿಂಬಾಗಿಲಿನಿAದ ಮನೆಯನ್ನು ಪ್ರವೇಶಿಸಿ ಎರಡು ಚಿನ್ನದ ಸರ, ಚಿನ್ನದ ಉಂಗುರ, ಕಿವಿಯೋಲೆ, ರೂ. ೫೦ ಸಾವಿರ ನಗದು ಸೇರಿದಂತೆ ಮದ್ಯದ ಬಾಟಲಿಯನ್ನು ದರೋಡೆ ಮಾಡಿದ್ದಾನೆ.

ಮೃತನ ಪುತ್ರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ಕೈಗೆತ್ತಿಕೊಂಡು ಆರೋಪಿಯನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಕೊಲೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ಮನೆಯೊಳಗೆ ಅಕ್ರಮ ಪ್ರವೇಶಕ್ಕೆ ೧೦ ವರ್ಷ ಸಜೆ, ದರೋಡೆಗೆ ೭ ವರ್ಷ ಸಜೆ ಹಾಗೂ ರೂ. ೪೫ ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ತೀರ್ಪು ನೀಡಿದ್ದಾರೆ.

ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕ ಎನ್.ಪಿ. ದೇವೇಂದ್ರ ವಾದ ಮಂಡಿಸಿದರು.