ಸೋಮವಾರಪೇಟೆ, ಜ.೨೮: ಮೊನ್ನೆಯಷ್ಟೇ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರದಲ್ಲಿ ಹುಲಿಹೆಜ್ಜೆ ಪತ್ತೆಯಾಗಿ, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದ್ದು, ಇಂದು ಶಾಂತಳ್ಳಿ-ಜೇಡಿಗುAಡಿ ಭಾಗದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿ ಈ ಭಾಗದ ಕೃಷಿಕರಲ್ಲಿ ಆತಂಕ ಉಂಟುಮಾಡಿದೆ.

ತಲ್ತರೆಶೆಟ್ಟಳ್ಳಿ, ಜೇಡಿಗುಂಡಿ, ಶಾಂತಳ್ಳಿ ಗ್ರಾಮಗಳ ಗಡಿಗಳನ್ನು ಹೊಂದಿರುವ ಜೇಡಿಗುಂಡಿಯ ಗದ್ದೆ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡುಬAದಿವೆ. ಸ್ಥಳೀಯರಾದ ವಿನಯ್, ಶರತ್ ಅವರುಗಳ ಗದ್ದೆಯಲ್ಲಿ ಅಚ್ಚಾಗಿರುವ ಹೆಜ್ಜೆ ಗುರುತನ್ನು ಕೃಷಿಕರು ಗಮನಿಸಿದ್ದಾರೆ. ಈ ಬಗ್ಗೆ ಸುತ್ತಮುತ್ತಲ ಗ್ರಾಮಗಳಿಗೆ ಮಾಹಿತಿ ನೀಡಲಾಗಿದೆ.

ಮೊನ್ನೆ ದಿನ ಚನ್ನಾಪುರ ಭಾಗದಲ್ಲಿ ಕಾಣಿಸಿಕೊಂಡ ಹುಲಿಯೇ ಇಲ್ಲಿಗೂ ಬಂದಿದೆಯೇ ಎಂಬ ಸಂಶಯ ಮೂಡಿದೆ. ಜೇಡಿಗುಂಡಿ ಭಾಗದಲ್ಲಿ ಹುಲಿಯ ಓಡಾಟದ ಬಗ್ಗೆ ಅರಣ್ಯ ಇಲಾಖೆಗೆ ರಾತ್ರಿಯವರೆಗೂ ಮಾಹಿತಿ ಲಭಿಸಿಲ್ಲ ಎನ್ನಲಾಗಿದೆ.

ಚನ್ನಾಪುರದಲ್ಲಿ ಹುಲಿಯ ಸಂಚಾರದ ಪತ್ತೆಗೆ ಸಿ.ಸಿ. ಕ್ಯಾಮರಾವನ್ನು ಇಲಾಖೆಯಿಂದ ಅಳವಡಿಸಲಾಗಿದೆ. ಶಾಂತಳ್ಳಿ ಭಾಗವು ಯಥೇಚ್ಛವಾಗಿ ಬೆಟ್ಟಗುಡ್ಡ, ಕಾಡುಮೇಡು ಪ್ರದೇಶವಾಗಿದ್ದು, ಕೃಷಿಕ ವರ್ಗ ಹೆಚ್ಚು ನೆಲೆಸಿದೆ. ಜನ ಜಾನುವಾರುಗಳ ಓಡಾಟದ ಪ್ರದೇಶದಲ್ಲಿಯೇ ಹುಲಿಯ ಹೆಜ್ಜೆ ಕಂಡು ಬಂದಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.